ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಸಂಪನ್ನ

Spread the love

ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಸಂಪನ್ನ

ಜನವರಿ 26 ರಿಂದ ನಡೆದ ಸರ್ವಧರ್ಮ ಸಮನ್ವಯ ಕೇಂದ್ರ ಕಾರ್ಕಳದ ಐತಿಹಾಸಿಕ ಅತ್ತೂರು ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವವು ಜನವರಿ 30 ರಂದು ವಿಜೃಂಭಣೆಯಿಂದ ಸಂಪನ್ನಗೊಂಡಿತು. ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಪರಮಪೂಜ್ಯ ಪೀಟರ್ ಪಾವ್ಲ್ ಸಲ್ಡಾನ್ಹಾರವರು ಮಾರ್ಗದರ್ಶಿ ಮಾತೆಯ ಸಂಭ್ರಮದ ಪೂಜೆಯನ್ನು ನೆರವೇರಿಸುವುದರೊಂದಿಗೆ ಐದು ದಿನಗಳ ಮಹೋತ್ಸವಕ್ಕೆ ತೆರೆ ಬಿದ್ದಿತು.

“ಮನುಷ್ಯನು ತನ್ನ ಒಳ್ಳೆಯತನದಿಂದ ಗುರುತಿಸಲ್ಪಡುತ್ತಾನೆ. ಅವನ ಇತರ ಸಾಧನೆಗಳು ಎಷ್ಟಿದ್ದರೂ, ಲೋಕಕಲ್ಯಾಣಕ್ಕಾಗಿ ಅವನು ಮಾಡಿದ ಸತ್ಕಾರ್ಯಗಳು ಅವನನ್ನು ಶ್ರೇಷ್ಠವಾಗಿಸುತ್ತವೆ. ನಮ್ಮೀ ಲೋಕದಲ್ಲಿ ಇಂಥಹ ಅನೇಕರು ಜೀವಿಸಿದ್ದಾರೆ. ಅವರ ಆದರ್ಶವನ್ನು ಪಾಲಿಸುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಸಂತ ಲಾರೆನ್ಸರ ಜೀವನ ಅನುಕರಣೀಯ” ಎಂದು ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ರವರು ಪ್ರಬೋಧಿಸಿದರು. ಅವರು ನೆರವೇರಿಸಿದ ಹಬ್ಬದ ಸಂಭ್ರಮದ ಬಲಿಪೂಜೆಯಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಧರ್ಮಗುರುಗಳು ಪಾಲ್ಗೊಂಡಿದ್ದರು.. ಈ ಬಲಿಪೂಜೆಯಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಅಂತಿಮ ದಿನದಂದು ಪುಣ್ಯಕ್ಷೇತ್ರದಲ್ಲಿ ಹತ್ತು ಬಲಿಪೂಜೆಗಳು ನೆರವೇರಿದವು. ಮಹೋತ್ಸವದ ಅಂತಿಮ ಬಲಿಪೂಜೆಯು ರಾತ್ರಿ 9.30 ಗಂಟೆಗೆ ನೆರವೇರಿತು.

ಧರ್ಮಗುರುಗಳು ಭಕ್ತಾದಿಗಳಿಗೆ ಪಾಪ ನಿವೇದನೆಯ ಸಂಸ್ಕಾರವನ್ನು ನೀಡುವುದರಲ್ಲಿ ಹಾಗೂ ಆಶೀರ್ವದಿಸುವುದರಲ್ಲಿ ತಮ್ಮನ್ನೇ ತೊಡಗಿಸಿಕೊಂಡರೆ ಸೇವಾದರ್ಶಿಗಳು ಅಸ್ವಸ್ಥರ ಶಿರದ ಮೇಲೆ ಹಸ್ತಗಳನ್ನಿಟ್ಟು ಪ್ರಾರ್ಥಿಸಿದರು. ನೂರಾರು ಸ್ವಯಂಸೇವಕರು ವಿವಿಧ ವಿಭಾಗಗಳಲ್ಲಿ ಸೇವೆಯನ್ನು ನೀಡಿ ಮಹೋತ್ಸವದ ಯಶಸ್ಸಿಗೆ ಕಾರಣೀಭೂತರಾದರು.

ಅಂತಿಮ ದಿನದಂದು ಮಂಗಳೂರಿನ ಧರ್ಮಾಧ್ಯಕ್ಷರ ಹಬ್ಬದ ಬಲಿಪೂಜೆಯ ಹೊರತಾಗಿ, ಬ್ರಹ್ಮಾವರದ ವಂದನೀಯ ವಿಕ್ಟರ್ ಫೆರ್ನಾಂಡಿಸ್, ಮಂಗಳೂರು ರೊಸಾರಿಯೊ ಚರ್ಚಿನ ವಂದನೀಯ ಜೆ.ಬಿ.ಕ್ರಾಸ್ತಾ, ಮಂಗಳೂರು ಧರ್ಮಾಧ್ಯಕ್ಷರ ನಿವಾಸದ ವಂದನೀಯ ವಾಲ್ಟರ್ ಡಿ’ಮೆಲ್ಲೊ, ಮಂಗಳೂರಿನ ಗುರು ಶ್ರೇಷ್ಠರು ವಂದನೀಯ ಮ್ಯಾಕ್ಷಿಮ್ ನೊರೊನ್ಹಾ, ಉಡುಪಿ ಧರ್ಮಪ್ರಾಂತದ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ವಂದನೀಯ ವಿನ್ಸೆಂಟ್ ಕ್ರಾಸ್ತ ಹಾಗೂ ಉಜ್ವಾಡ್ ಕೊಂಕಣಿ ಪತ್ರಿಕೆಯ ಸಂಪಾದಕ ವಂದನೀಯ ರೊಯ್ಸನ್ ಫೆರ್ನಾಂಡಿಸ್‍ರವರು ಕೊಂಕಣಿ ಭಾಷೆಯಲ್ಲಿ ಬಲಿಪೂಜೆಗಳನ್ನು ನೆರವೇರಿಸಿದರು. ಚಿಕ್ಕಮಗಳೂರಿನ ವಂದನೀಯ ಫ್ರೆಡರಿಕ್ ಪಾಯ್ಸ್, ಬಸರೀಕಟ್ಟೆಯ ವಂದನೀಯ ವಿನ್ಸೆಂಟ್ ಡಿ’ಸೋಜಾ ಹಾಗೂ ಸಾಗರದ ವಂದನೀಯ ಎಫ್ರೆಮ್ ಡಯಾಸ್‍ರವರು ಕನ್ನಡ ಬಲಿಪೂಜೆಗಳನ್ನು ನೆರವೇರಿಸಿ ಭಕ್ತಾದಿಗಳಿಗಾಗಿ ಪ್ರಾರ್ಥಿಸಿದರು.


Spread the love