ಅನಧಿಕೃತ ದತ್ತು, ನಕಲಿ ದಾಖಲೆ ಸೃಷ್ಟಿಸಿ ಶಿಶು ಮಾರಾಟ ಆರೋಪ: ವೈದ್ಯ ಸೇರಿ ಇಬ್ಬರ ಬಂಧನ

Spread the love

ಅನಧಿಕೃತ ದತ್ತು, ನಕಲಿ ದಾಖಲೆ ಸೃಷ್ಟಿಸಿ ಶಿಶು ಮಾರಾಟ ಆರೋಪ: ವೈದ್ಯ ಸೇರಿ ಇಬ್ಬರ ಬಂಧನ

ಉಡುಪಿ: ಒಂದು ತಿಂಗಳ ಹೆಣ್ಣು ಮಗುವನ್ನು ಕಾನೂನುಬಾಹಿರವಾಗಿ ದತ್ತು ನೀಡಿ, ನಕಲಿ ಜನನ ದಾಖಲೆಗಳನ್ನು ಸೃಷ್ಟಿಸಿ ಶಿಶು ಕಳ್ಳಸಾಗಣೆ ನಡೆಸಿದ ಆರೋಪದಡಿ ವೈದ್ಯರೊಬ್ಬರು ಸೇರಿದಂತೆ ಇಬ್ಬರನ್ನು ಉಡುಪಿ ಮಹಿಳಾ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಉಡುಪಿ ಬನ್ನಂಜೆಯ ನಿವಾಸಿ ಹಾಗೂ ಕಾಮತ್ ನರ್ಸಿಂಗ್ ಹೋಮ್ನ ವೈದ್ಯ ಡಾ. ಕೆ. ಸುರೇಂದ್ರ ಕಾಮತ್ (76) ಮತ್ತು ನೇಜಾರು ಸಂತೆಕಟ್ಟೆಯ ರಾಜೀವನಗರ ನಿವಾಸಿ ಎಸ್. ಪ್ರಕಾಶ್ (50) ಎಂದು ಗುರುತಿಸಲಾಗಿದೆ.

ಜೂನ್ 19ರಂದು ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ವಲಯ ಮೇಲ್ವಿಚಾರಕರು ಮಕ್ಕಳ ರಕ್ಷಣಾ ಘಟಕಕ್ಕೆ ಕರೆ ಮಾಡಿ, ನೇಜಾರು ಸಂತೆಕಟ್ಟೆಯ ದಂಪತಿ ಪ್ರಕಾಶ್ ಹಾಗೂ ಪೂರ್ಣಿಮಾ ಅವರು ಸುಮಾರು ಒಂದು ತಿಂಗಳ ಹೆಣ್ಣು ಮಗುವನ್ನು ಯಾವುದೇ ಕಾನೂನಾತ್ಮಕ ಪ್ರಕ್ರಿಯೆಗಳಿಲ್ಲದೆ ಸಾಕುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಶಿಶು ಅಭಿವೃದ್ಧಿ ಯೋಜನೆಯ ಸಿಬ್ಬಂದಿ ದಂಪತಿ ವಾಸಿಸುತ್ತಿದ್ದ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದಾಗ ಹಲವು ಅನುಮಾನಾಸ್ಪದ ಸಂಗತಿಗಳು ಬೆಳಕಿಗೆ ಬಂದಿವೆ.

ವಿಚಾರಣೆಯಲ್ಲಿ, ಮದುವೆಯಾಗಿ 11 ವರ್ಷಗಳಾದರೂ ಮಕ್ಕಳಾಗದ ಕಾರಣ ಪ್ರಕಾಶ್ ಮತ್ತು ಪೂರ್ಣಿಮಾ ಅವರು ಉಡುಪಿ ಕಾಮತ್ ನರ್ಸಿಂಗ್ ಹೋಮ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೇ ವೇಳೆ ಪೂರ್ಣಿಮಾ ಅವರ ಅಕ್ಕ ಲಕ್ಷ್ಮಿ ಅವರ ಮೂಲಕ ಆಸ್ಪತ್ರೆಯಲ್ಲಿ ಮಗು ಇರುವ ಮಾಹಿತಿ ದೊರೆತಿದ್ದು, ಬಳಿಕ ವೈದ್ಯ ಡಾ. ಸುರೇಂದ್ರ ಕಾಮತ್ ಅವರ ಬಳಿ ಮಗುವನ್ನು ನೀಡುವಂತೆ ಮನವಿ ಮಾಡಿರುವುದಾಗಿ ತಿಳಿದುಬಂದಿದೆ.

ಆರೋಪದ ಪ್ರಕಾರ, ವೈದ್ಯರು ಸುಮಾರು ಒಂದು ತಿಂಗಳ ಹಿಂದೆ ಹೆಣ್ಣು ಮಗುವನ್ನು ದಂಪತಿಗೆ ನೀಡಿ, ಮಗುವಿನ ಜನನ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಟ್ಟಿದ್ದಾರೆ ಎನ್ನಲಾಗಿದೆ. ಮಗುವಿನ ಜೈವಿಕ ಪೋಷಕರ ಬಗ್ಗೆ ದಂಪತಿಗೆ ಯಾವುದೇ ಮಾಹಿತಿ ಇಲ್ಲದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ಆರೋಪಿತರು ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಒಳಸಂಚು ರೂಪಿಸಿ, ಮಗುವಿನ ಜನನ ಮತ್ತು ಪೋಷಕರ ಕುರಿತು ನಕಲಿ ದಾಖಲೆಗಳನ್ನು ಸೃಷ್ಟಿಸಿ ಶಿಶುವನ್ನು ಕಳ್ಳಸಾಗಣೆ ಮೂಲಕ ಮಾರಾಟ ಮಾಡಿದ ಆರೋಪ ಕೇಳಿಬಂದಿದೆ.

ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದಲ್ಲಿ ವೈದ್ಯ ಡಾ. ಕೆ. ಸುರೇಂದ್ರ ಕಾಮತ್ ಹಾಗೂ ಎಸ್. ಪ್ರಕಾಶ್ ಅವರನ್ನು ಬಂಧಿಸಲಾಗಿದ್ದು, ಉಳಿದ ಇಬ್ಬರು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.


Spread the love
Subscribe
Notify of

0 Comments