ಅನಾಥಾಲಯ, ಮಕ್ಕಳ ಪಾಲನಾ ಸಂಸ್ಥೆಗಳ ನೋಂದಣಿ ಕಡ್ಡಾಯ: ತಪ್ಪಿದ್ದಲ್ಲಿ ಜೈಲು, ದಂಡ

Spread the love

ಅನಾಥಾಲಯ, ಮಕ್ಕಳ ಪಾಲನಾ ಸಂಸ್ಥೆಗಳ ನೋಂದಣಿ ಕಡ್ಡಾಯ: ತಪ್ಪಿದ್ದಲ್ಲಿ ಜೈಲು, ದಂಡ

ಮಂಗಳೂರು :ಪಾಲನೆ ಮತ್ತು ರಕ್ಷಣೆಯ ಅವಶ್ಯವಿರುವ ಮಕ್ಕಳಿಗೆ ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿರುವ ಅನಾಥಾಲಯಗಳು, ಆಶ್ರಯಧಾಮಗಳು, ತೆರೆದ ತಂಗುದಾಣಗಳು ನಿರ್ಗತಿಕ ಮಕ್ಕಳ ಕುಠೀರ, ಬಾಲಕಾರ್ಮಿಕರಿಗಾಗಿ ನಡೆಸುತ್ತಿರುವ ಬ್ರಿಡ್ಜ್ ಶಾಲೆಗಳು, ವಿಶೇಷ ದತ್ತು ಕೇಂದ್ರಗಳು, ಉಜ್ವಲ ಕೇಂದ್ರ, ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಮಾನ್ಯತೆ ಪಡೆದ ವಸತಿಯುತ ಸಂಸ್ಥೆಗಳು, ಅರ್ಹ ಸಂಸ್ಥೆಗಳು, (ಶೈಕ್ಷಣಿಕ ಸಂಸ್ಥೆಗಳ ವಸತಿ ಶಾಲೆಗಳನ್ನು ಹೊರತುಪಡಿಸಿ) ಎಲ್ಲಾ ರೀತಿಯ ಮಕ್ಕಳ ಪಾಲನಾ ಹಾಗೂ ರಕ್ಷಣಾ ಸಂಸ್ಥೆಗಳನ್ನು ಬಾಲನ್ಯಾಯ ಕಾಯ್ದೆ 2015 ರಡಿಯಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ.

ಆದರೆ ಈ ಕಾಯ್ದೆಯಡಿ ನೋಂದಣಿಯಾಗದೇ, ಮಕ್ಕಳಿಗಾಗಿ ಸಂಸ್ಥೆಗಳನ್ನು ನಡೆಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಸರ್ವೋಚ್ಛ ನ್ಯಾಯಾಲಯವು ರಿಟ್ ಅರ್ಜಿ (ಕ್ರಿಮಿನಲ್) ಸಂಖ್ಯೆ102 2007 ದಿನಾಂಕ30.06.2017 ಕ್ಕೆ ಸಂಬಂಧಿಸಿದಂತೆ ಹೊರಡಿಸಿದ ಆದೇಶದಲ್ಲಿ ಮಕ್ಕಳ ಪಾಲನಾ ಸಂಸ್ಥೆಗಳು ಬಾಲನ್ಯಾಯ ಕಾಯ್ದೆ 2015 ರಡಿಯಲ್ಲಿ ಕಡ್ಡಾಯವಾಗಿ ದಿನಾಂಕ 31.12.2017ರೊಳಗೆ ನೋಂದಣಿಯಾಗಿ ಕಾರ್ಯನಿರ್ವಹಿಸಬೇಕೆಂದು ಸ್ಪಷ್ಟವಾಗಿ ನಿರ್ದೇಶನ ನೀಡಿದೆ.

ಈ ಹಿನ್ನೆಲೆಯಲ್ಲಿ ಬಾಲನ್ಯಾಯ ಕಾಯ್ದೆಯಡಿ 2015ರಡಿ ಇದುವರೆಗೂ ನೋಂದಣಿ ಮಾಡಿಸಿಕೊಳ್ಳದಿರುವ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಕೂಡಲೇ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾಧಿಕಾರಿಯವರ ಕಛೇರಿ, 1 ನೇ ಮಹಡಿ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ದೂರವಾಣಿ ಸಂಖ್ಯೆ:0824-2440004/ 9482756407 ಇವರನ್ನು ಸಂಪರ್ಕಿಸಿ ನಿಗದಿತ ನಮೂನೆಯನ್ನು ಪಡೆದು ಡಿಸೆಂಬರ್ 31 ರೊಳಗಾಗಿ ನೋಂದಾವಣೆಗೆ ಪ್ರಸ್ತಾವನೆಯನ್ನು ಸಲ್ಲಿಸಲು ತಿಳಿಸಲಾಗಿದೆ. ತಪ್ಪಿದ್ದಲ್ಲಿ ಬಾಲನ್ಯಾಯ ಕಾಯ್ದೆ 2015 ರ ಸೆಕ್ಷನ್ 42 ರಂತೆ ಒಂದು ವರ್ಷದವರೆಗೆ ವಿಸ್ತರಿಸಬಹುದಾದ ಜೈಲುಶಿಕ್ಷೆ ಅಥವಾ ರೂ. ಒಂದು ಲಕ್ಷಕ್ಕೆ ಕಡಿಮೆ ಇಲ್ಲದಂತೆ ದಂಡ ಅಥವಾ ಎರಡನ್ನೂ ವಿಧಿಸಲಾಗುವುದು. ಹಾಗೂ ಸಂಸ್ಥೆಯು ಯಾವುದೇ ಕಾಯ್ದೆಯಡಿ ನೋಂದಣಿಯಾಗಿದ್ದರೂ ಅದನ್ನು ಹಿಂಪಡೆಯಲು ಅಥವಾ ರದ್ದುಪಡಿಸಲು ಕ್ರಮ ಜರುಗಿಸಲಾಗುವುದು. ಮುಂದುವರೆದು ಒಂದು ವೇಳೆ ಮಕ್ಕಳ ಮೇಲೆ ದೌರ್ಜನ್ಯ ನಡೆದಲ್ಲಿ ಹಾಗೂ ಮಕ್ಕಳ ಹಕ್ಕುಗಳನ್ನು ಉಲ್ಲಂಫಿಸಿದ್ದಲ್ಲಿ ಸಂಸ್ಥೆಯ ಮುಖ್ಯಸ್ಥರನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಎಚ್ಚರಿಸಿದ್ದಾರೆ.


Spread the love