ಅನುಭವಿತ ಮನಸ್ಸುಗಳ ಸಾಹಿತ್ಯ ಪಕ್ವವಾಗಿರುತ್ತದೆ–ಡಾ. ಹೊಸಮನಿ

Spread the love

ಅನುಭವಿತ ಮನಸ್ಸುಗಳ ಸಾಹಿತ್ಯ ಪಕ್ವವಾಗಿರುತ್ತದೆ–ಡಾ. ಹೊಸಮನಿ

ಉಡುಪಿ: ಮಂಜುನಾಥ್ ಎಜುಕೇಷನ್ ಟ್ರಸ್ಟ್ (ರಿ.) ಕಥಾಬಿಂದು ಸಾಹಿತ್ಯ-ಸಾಂಸ್ಕøತಿಕ ವೇದಿಕೆ ಹಾಗೂ ಪರ್ಯಾಯ ಪಲಿಮಾರು ಮಠ ಉಡುಪಿ ಇವರ ಆಶ್ರಯದಲ್ಲಿ ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಕನ್ನಡ ಚಿಂತನ ಮತ್ತು ಸಂಗೀತ-ಸಾಹಿತ್ಯ-ಸಾಂಸ್ಕøತಿಕ 2014 ಕಾರ್ಯಕ್ರಮವನ್ನು ಶ್ರೀ ಶ್ರೀ ವಿದ್ಯಾಧೀಶ ಶ್ರೀಪಾದಂಗಳವರು ಉದ್ಘಾಟಿಸಿದ ನಂತರ ಪಿ.ವಿ. ಪ್ರದೀಪ್ ಕುಮಾರ್‍ರವರ 25ನೇ ಕೃತಿ ‘ನೊಂದವರ ನೆಂಟ’ ಕಾದಂಬರಿಯನ್ನು ಬಿಡುಗಡೆಗೊಳಿಸಿ ಇತ್ತೀಚಿನ ದಿನಗಳಲ್ಲಿ ಒಂದೆರಡು ಕೃತಿಗಳನ್ನು ರಚಿಸುವುದೇ ತ್ರಾಸದಾಯಕವಾಗಿರುವಾಗ 57 ಕೃತಿಗಳನ್ನು ರಚಿಸಿರುವುದೇ ಒಂದು ದೊಡ್ಡ ಸಾಧನೆಯಾಗಿದೆ. ಆ ಸಾಧನೆಗೆ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರರ ಸಹಾಯ ಸಹಕಾರವನ್ನು ನಾವಿಲ್ಲಿ ನೆನೆಯಬೇಕಾಗಿದೆ. ಇಂದು ಸಾಹಿತ್ಯ ಕಾರ್ಯಕ್ರಮಗಳು ನಡೆಯಲು ಮತ್ತು ಸಾಹಿತ್ಯ ಸಂಸ್ಕøತಿಯು ಬೆಳೆಯಲು ಹರಿಕೃಷ್ಣ ಪುನರೂರರ ಸಹಕಾರ ಅತೀ ದೊಡ್ಡದಿದೆ. ಅವರಿಗೆ ಇನ್ನೂ ಹೆಚ್ಚಿನ ಸಹಾಯ ಸಹಕಾರವನ್ನು ಕೊಡುವಲ್ಲಿ ಶ್ರೀ ಕೃಷ್ಣನ ದಯೇ ಸದಾ ಅವರಿಗೆ ಬೆಂಗಾವಲಾಗಿರಲಿ ಎಂದು ಹೇಳಿದರು.

ಕನ್ನಡ ಚಿಂತನ ಕಾರ್ಯಕ್ರಮದ ಕುರಿತು ಉಪನ್ಯಾಸ ನೀಡಿದ ಸಾರ್ವಜನಿಕ ಗ್ರಂಥಾಲಯದ ನಿರ್ದೇಶಕರಾದ ಸತೀಶ್‍ಕುಮಾರ್ ಹೊಸಮನಿ ಅವರು ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಕೃತಿಗಳು ಲೋಕಾರ್ಪಣೆಗೊಳ್ಳುತ್ತಿವೆ. ಗ್ರಂಥಾಲಯ ಇಲಾಖೆ ರಚನಕಾರರಿಗೆ ಆರ್ಥಿಕ ಹೊರೆ ಬೀಳದ ರೀತಿಯಲ್ಲಿ ಕೃತಿಗಳನ್ನು ಖರೀದಿಸಿ ಪ್ರೋತ್ಸಾಹವನ್ನು ನೀಡುತ್ತಿದೆ. ನೊಂದು ಬೆಂದ ಮನಸ್ಸುಗಳು ತಮ್ಮ ಭಾವನೆಗಳನ್ನು ಬರಹದ ಮೂಲಕ ಹೊರಹಾಕುತ್ತವೆ. ಆ ಸಾಹಿತ್ಯ ವಾಸ್ತವಕ್ಕೆ ಹತ್ತಿರವಾಗಿರುತ್ತದೆ ಎಂದರು.

ಸಂಘಟಕ ಮತ್ತು ಹೃದಯವಾಹಿನಿ ಕರ್ನಾಟಕದ ಅಧ್ಯಕ್ಷ ಕೆ.ಪಿ. ಮಂಜುನಾಥ್ ಸಾಗರ್ ಮಾತನಾಡಿ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಕನ್ನಡ ಭಾಷೆಯ ಮೇಲೆ ಅನ್ಯ ಭಾಷೆಗಳ ಒತ್ತಡವಿರುವುದರಿಂದ ಗಡಿನಾಡ ಕನ್ನಡಿಗರು ರಾಜ್ಯದ ಆಡಳಿತ ಭಾಷೆಯನ್ನು ಹೆಚ್ಚುಹೆಚ್ಚಾಗಿ ಬಳಸಬೇಕು. ಆ ಕಾರಣದಿಂದಾಗಿ ರಾಜ್ಯ ಸರಕಾರ ಕನ್ನಡ ಚಿಂತನ ಕಾರ್ಯಕ್ರಮಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಹಮ್ಮಿಕೊಳ್ಳುತ್ತಿದೆ. ಕರ್ನಾಟಕದೊಳಗಿನ ಪ್ರತಿಯೊಬ್ಬರಿಗೂ ಈ ಸಂದೇಶ ತಲುಪಿಸಲು ಪ್ರಯತ್ನಿಸೋಣವೆಂದರು.

ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರರ ಅಧ್ಯಕ್ಷತೆಯಲ್ಲಿ ಶ್ರೀ ವಿನಯ ಕುಮಾರ್ ನಾಯ್ಕ್ (ಮಾಧ್ಯಮ), ಶ್ರೀ ಕೃಷ್ಣಪ್ಪಗೌಡ (ತಾರಸಿ ಕೃಷಿ) ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಶ್ರೀ ಕೆ. ಎಂ. ಉಡುಪ, ಶ್ರೀ ಬಿ.ಕೆ. ಮಾಧವರಾವ್, ಮಟ್ಟಿ ಲಕ್ಷ್ಮೀನಾರಾಯಣರಾವ್, ಬೆಟ್ಟಂಪಾಡಿ ಸುಂದರ್ ಶೆಟ್ಟಿ, ಇವರು ಅತಿಥಿಗಳಾಗಿದ್ದರು, ಕಾರ್ಯಕ್ರಮವನ್ನು ಹರೀಶ್ ಒಡ್ಡಂಬೆಟ್ಟು ನಿರೂಪಿಸಿದರು.

ಕಾರ್ಯಕ್ರಮದ ಮೊದಲಿಗೆ ಮೊದಲಿಗೆ ಸುಚಿತ್ರ ಮತ್ತು ಭಗವಾನ್ ಅವರಿಂದ ಗೀತಾಗಾಯನ ಹಾಗೂ ಕು|| ಜಿ.ಜಿ. ಅನ್ನಪೂರ್ಣ ಪ್ರಭು, ಹಾಗೂ ಜಿ.ಜಿ. ಪ್ರತೀಕ್ಷ ಪ್ರಭುರವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನೆರವೇರಿತು.


Spread the love