ಅಮೃತಸಂಜೀವಿನಿ ಮಂಗಳೂರು 21ನೇ ಮಾಸಿಕ ಯೋಜನೆ

Spread the love

ಅಮೃತಸಂಜೀವಿನಿ  ಮಂಗಳೂರು 21ನೇ ಮಾಸಿಕ ಯೋಜನೆ

 ಮಂಗಳೂರು : ಸೇವೆಯೇ ಪರಮಧರ್ಮ ಎಂಬ ಮಾತಿನಂತೆ ಅಶಕ್ತ ಸಮಾಜದ ಏಳಿಗೆಯ ಪಣತೊಟ್ಟು ಸಶಕ್ತ ಯುವ ಸಮಾಜವನ್ನು  ಒಗ್ಗೂಡಿಸುತ್ತಾ ವಜ್ರದೇಹಿ ಶ್ರೀಗಳ ಉತ್ತಮ ಮಾರ್ಗದರ್ಶನದಲ್ಲಿ ತಿಂಗಳಿಗೆ ಒಂದು ಅಶಕ್ತರನ್ನು ಗುರುತಿಸಿ ಅವರಿಗೆ ಸಹಾಯ ಹಸ್ತ ಚಾಚುವ ಕೆಲಸವನ್ನು ಸತತ 21 ತಿಂಗಳಿಂದ ಅಮೃತಸಂಜೀವಿನಿ(ರಿ.) ಸಂಸ್ಥೆ ಮಾಡುತ್ತಾ ಬರುತಿದೆ.

ಗುರುತಿಸಿದ ವ್ಯಕ್ತಿಯು ವಿವರವನ್ನು ಸಾಮಾಜಿಕ ಜಾಲತಾಣದ ಮೂಲಕ ಹರಿಯ ಬಿಡುವ ಸಂಜೀವಿನಿಗಳು ಅದರ ಪ್ರತಿಫಲದಿಂದ ಸಂಗ್ರಹವಾದ ಮೊತ್ತವನ್ನು ತಿಂಗಳ ಮೂರನೇ ಭಾನುವಾರ ಗುರುತಿಸಿದ ವ್ಯಕ್ತಿಯ ಬಳಿಗೆ ತೆರಳಿ ಸಹಾಯ ಹಸ್ತ ಚಾಚುವ ಕಾರ್ಯವನ್ನು ನಿರಂತರ ಮಾಡುತಿದ್ದಾರೆ. ಇಷ್ಟೇ ಅಲ್ಲದೆ ಸಮಾಜ ಬದಲಾವಣೆಯ ಬೃಹತ್ತಾದ ಕನಸು ಹೊತ್ತಿರುವ ಅಮೃತಸಂಜೀವಿನಿ(ರಿ.) ಇತರ ಅನೇಕ ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಳ್ಳುತ್ತಿದೆ.

 ಕೇವಲ ಸಾಮಾಜಿಕ ಜಾಲತಾಣವನ್ನೇ ಉಪಯೋಗಿಸಿಕೊಂಡು ಸತತ 21 ಮಾಸಿಕ ಯೋಜನೆ ಹಾಗೂ 2 ತುರ್ತು ಯೋಜನೆಗಳನ್ನು ಯಶಸ್ವಿಯಾಗಿ ಪೋರೈಸಿದ ಅಮೃತಸಂಜೀವಿನಿ(ರಿ.) ಸುಮಾರು 13 ಲಕ್ಷದವರೆಗೆ ಧನ ಸಂಗ್ರಹಿಸಿ ಅಶಕ್ತರಿಗೆ ನೀಡಿ ಸಣ್ಣ ಮಟ್ಟದಲ್ಲಿ ಅವರ ಕಣ್ಣೀರೊರೆಸುವ ಕಾರ್ಯವನ್ನು ಮಾಡುವ ಮೂಲಕ ಕರಾವಳಿ ಕರ್ಣಾಟಕದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಸಂಸ್ಥೆಯು ತನ್ನ 21ನೇ ಮಾಸಿಕ ಯೋಜನೆಗಾಗಿ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಮೇರ್ಲದ ಕುಟುಂಬವೊಂದನ್ನು ಆರಿಸಿತ್ತು. ಬಾಲಕೃಷ್ಣ ರೈ ಎಂಬವರ ತಾಯಿ ಹೆಂಡತಿ ಹಾಗೂ ಎರಡು ಮಕ್ಕಳನ್ನೊಳಗೊಂಡ ಒಂದು ಸಣ್ಣ ಕುಟುಂಬ.

ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಈ ಸಣ್ಣ ಕುಟುಂಬಕ್ಕೆ ವಿಧಿಯ ವಕ್ರದ್ರಷ್ಟಿ ಅದಾಗಲೇ ಬಿದ್ದಾಗಿತ್ತು. ಹೋಟೆಲ್ ಒಂದರಲ್ಲಿ ಕಾರ್ಮಿಕನಾಗಿ ದುಡ್ಡಿಯುತ್ತಿದ್ದ ಬಾಲಕೃಷ್ಣ ರೈ ಇವರಿಗೆ 2 ವರ್ಷದ ಮುಂಚೆ ಆರೋಗ್ಯದಲ್ಲಿ ಆದ ಏರುಪೇರಿಗಾಗಿ ವೈದ್ಯರನ್ನು ಸಂಪರ್ಕಿಸಿದಾಗ ತಮಗಿರುವುದು ಕ್ಯಾನ್ಸರ್ ಎಂಬ ಮಾರಕಕಾಯಿಲೆ ಎಂಬುದು ತಿಳಿಯಿತು.. ದಿನೇದಿನೇ ಆರೋಗ್ಯದಲ್ಲಿ ಆದ ಏರುಪೇರಿನಿಂದಾಗಿ ಕೆಲಸಕ್ಕೂ ಹೋಗಲಾರದಂತಾಯಿತು.

ಮನೆಯ ಯಜಮಾನನಿಗೆ ಕೆಲಸವೂ ಇಲ್ಲವೆಂದಾದ ಮೇಲೆ ದಿನ ಕಳೆಯುದಾದರೂ ಹೇಗೆ.? ಈ ಕಾರಣಕ್ಕಾಗಿ ತಮಗಿದ್ದ ಬಾಡಿಗೆ ಮನೆಯೂ ಕೈತಪ್ಪಿ ತನ್ನ ಸೋದರಿಯ ಮನೆಯಲ್ಲಿ ದಿನ ಕಳೆಯಬೇಕಾಗಿ ಬಂತು.

ಚಿಕಿತ್ಸೆಗಾಗಿ 3-4 ಲಕ್ಷ ಖರ್ಚು ಬರಲಿದ್ದು ಇದೀಗ ಆಯುರ್ವೇದ ಚಿಕಿತ್ಸೆಯ ಮೊರೆ ಹೋಗಿದ್ದಾರೆ. ಹನ್ನೊಂದು ಹಾಗೂ ಮೂರು ವರ್ಷದ ಇಬ್ಬರು ಮಕ್ಕಳ ಭವಿಷ್ಯ, ಮನೆಯ ಸಂಪೂರ್ಣ ಜವಾಬ್ದಾರಿ ಇವೆಲ್ಲವನ್ನು ಹೊತ್ತು ಮುನ್ನಡೆಯ ಬೇಕಾದ ಮನೆಯ ಯಜಮಾನನೇ ಹಾಸಿಗೆ ಹಿಡಿದಿರುವುದು ಇಡೀ ಮನೆಯ ಸಂತೋಷಕ್ಕೆ ಕೊಳ್ಳಿ ಇಟ್ಟಂತಾಗಿದೆ..

ಇವರ ಈ ನೋವಿನ ಮಾತು ಸಂಜೀವಿನಿಗಳ ತಂಡ ಕೇಳಿ ಅವರ ಕುಟುಂಬಕ್ಕೆ ಧೈರ್ಯ ತುಂಬಿ  ಇವರ ಸಮಸ್ಯೆಗೆ ಹೆಗಲಾಗುವ ಉದ್ದೇಶದಿಂದ 21ನೇ ಮಾಸಿಕ ಯೋಜನೆಯನ್ನಾಗಿ ಆರಿಸಿಕೊಂಡು ಸಂಜೀವಿನಿ ಪರಿವಾರ ಸಂಸ್ಥೆಗಳ ಸಹಕಾರದಿಂದ ಸಾಮಾಜಿಕ ಜಾಲತಾಣದ ಮುಖಾಂತರ ಸಂಗ್ರಹವಾದ ₹80,000 ಮೊತ್ತವನ್ನು ಫಲಾನುಭವಿಯ ಮನೆಗೆ ತೆರಳಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಅಮೃತಸಂಜೀವಿನಿ® ಹಾಗೂ ರೋಟರೇಟ್ ಕ್ಲಬ್ ತಿಂಗಳಾಡಿ ಇದರ  ಸದಸ್ಯರು ಉಪಸ್ಥಿತರಿದ್ದರು.

 


Spread the love