ಅವಧೂತ ವಿನಯ್ ಗುರೂಜಿಗೆ ಬ್ಲ್ಯಾಕ್ ಮೇಲ್ ಆರೋಪ – ಐವರ ಬಂಧನ

Spread the love

ಅವಧೂತ ವಿನಯ್ ಗುರೂಜಿಗೆ ಬ್ಲ್ಯಾಕ್ ಮೇಲ್ ಆರೋಪ – ಐವರ ಬಂಧನ

ಬೆಂಗಳೂರು: ಚಿಕ್ಕಮಗಳೂರಿನ ಗೌರಿಗದ್ದೆ ಆಶ್ರಮದ ಅವಧೂತ ವಿನಯ್​ ಗುರೂಜಿಯವರ ತೇಜೋವಧೆ ಹೆಸರಿನಲ್ಲಿ ಹಣಕ್ಕಾಗಿ ಬ್ಲಾಕ್ ​ಮೇಲ್​​ ಮಾಡಿದ ಆರೋಪದ ಮೇಲೆ ಐವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ರವಿಕುಮಾರ್, ಮುನಿರಾಜು ಅಲಿಯಾಸ್ ಟೋಕನ್ ಮುನಿರಾಜು, ಮನೋಜ್, ಮುರಳಿ ಹಾಗೂ ಮಂಜು ಬಂಧಿತ ಆರೋಪಿಗಳು.

ದಲಿತ ಮಹಾ ಸಭಾ ಎಂಬ ಸಂಘಟನೆ ಕಟ್ಟಿಕೊಂಡಿದ್ದ ಮು‌ನಿರಾಜು, ಸಂಘಟನೆ ಹಾಗೂ ಯೂಟ್ಯೂಬ್​ ಚಾನೆಲ್​ ಹೆಸರಿನಲ್ಲಿ ಹಣ ವಸೂಲಿ ದಂಧೆಗೆ ಇಳಿದಿದ್ದ. ನಾಲ್ಕು ವರ್ಷಗಳಿಂದ ಸಮಾಜದ ಹಲವು ಪ್ರಭಾವಿ ವ್ಯಕ್ತಿಗಳಿಗೆ, ಇದೇ ರೀತಿ ಬ್ಲಾಕ್​ಮೇಲ್ ಮಾಡಿರುವ ಅಂಶ ಬಹಿರಂಗವಾಗಿದೆ. ನಂತರದ ದಿನಗಳಲ್ಲಿ ಇವರ ಕಣ್ಣು ಅವಧೂತ ವಿನಯ್ ಗುರೂಜಿ ಹಾಗೂ ಭಕ್ತರ ಮೇಲೂ ಬಿದ್ದು, ಅವರನ್ನು ಬೆದರಿಸಿದೆ. ವಿನಯ್​ ಗುರೂಜಿ ಭಕ್ತ ಪ್ರಶಾಂತ್ ಎಂಬುವವರನ್ನು ಸಂಪರ್ಕಸಿದ್ದ ಮುನಿರಾಜು ಗ್ಯಾಂಗ್​, ಮಧ್ಯವರ್ತಿ ಮುರಳಿ ಮೂಲಕ 30 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿತ್ತು. ವಿನಯ್​ ಗುರೂಜಿ ವಿರುದ್ಧ ಅಪಪ್ರಚಾರ ನಡೆಸಬಾರದೆಂದರೆ ಹಣ ನೀಡುವಂತೆ ಬ್ಲಾಕ್​ಮೇಲ್​ ಮಾಡಿತ್ತು. ಬಳಿಕ ಪ್ರಶಾಂತ್ ಈ ಸಂಬಂಧ ಸಿಸಿಬಿ ಪೊಲೀಸರ ಮೊರೆ ಹೊಗಿದ್ದರು.

ಕಾವೇರಿ ಟಿವಿ ಎಂಬ ಯುಟ್ಯೂಬ್ ಚಾನೆಲ್ ಮೂಲಕ ದಂಧೆಗಿಳಿಯುತ್ತಿದ್ದ ಮುನಿರಾಜ್​ ಗ್ಯಾಂಗ್,​ ಅಂಕರ್ ರವಿಕುಮಾರ್ ಎಂಬಾತನ ಮೂಲಕ ಪ್ರಖ್ಯಾತ ವ್ಯಕ್ತಿಗಳ ಚಾರಿತ್ರ್ಯ ಹರಣ ಮಾಡುತ್ತಿತ್ತು. ಮಹಾತ್ಮ ಗಾಂಧಿ ಟ್ರಸ್ಟ್​ನ ಸಂಸ್ಥಾಪಕ ಅಧ್ಯಕ್ಷರೂ ಆಗಿರುವ ವಿನಯ್ ಗುರೂಜಿ ವಿರುದ್ಧ ಟ್ರಸ್ಟ್ ಆರಂಭವಾದಾಗಿನಿಂದಲೂ ನಿರಂತರ ಅಪಪ್ರಚಾರ ಮಾಡಿಕೊಂಡು ಬರುತ್ತಿತ್ತು. ಪ್ರಶಾಂತ್​ ನೀಡಿದ ದೂರಿನ ಆಧಾರದ ಮೇಲೆ ಸಿಸಿಬಿ ಪೊಲೀಸರು ಕಾರ್ಯಾಚರಣೆಗೆ ಇಳಿದರು. ಮುನಿರಾಜು ಹಾಗೂ ಉಳಿದವರ ಬಂಧನಕ್ಕೆ ಪ್ರತ್ಯೇಕ ತಂಡ ರಚನೆ ಮಾಡಿಕೊಂಡು ಆರೋಪಿಗಳ ಬಗೆಗಿನ ನಿರಂತರ ಚಲನವಲನದ ಬಗ್ಗೆ ಗಮನ ಹರಿಸಿತ್ತು. ಹಣ ಪಡೆಯಲು ಮುರಳಿ ಎಂಬಾತನನ್ನು ಮುಂದೆ ಬಿಟ್ಟಿದ್ದ ಮುನಿರಾಜು, ಡೀಲ್ ಬಗ್ಗೆ ಮಾತನಾಡಲು ವಿಡಿಯೋ ಕಾಲ್ ಕೂಡ ಮಾಡಿದ್ದರು. ಏಕಕಾಲದಲ್ಲೇ ನಾಲ್ಕು ಜನ ಭಕ್ತನಾದ ಪ್ರಶಾಂತ್​ನೊಂದಿಗೆ ಮಾತನಾಡಿದ್ದರು. ಮೂವತ್ತು ಲಕ್ಷ ಹಣಕ್ಕೆ 30 ರೂಪಾಯಿ ಎನ್ನುವ ಕೋಡ್​ವರ್ಡ್ ಮೂಲಕ ಡೀಲ್​ಗೆ ಮುಂದಾಗಿದ್ದರು. ಹಣ ಪಡೆಯಲು ಮುಂದಾದ ವೇಳೆ ರೆಡ್ ಹ್ಯಾಂಡಾಗಿ ಮುನಿರಾಜ್​ ಗ್ಯಾಂಗ್​ ಸಿಕ್ಕಿಬಿದ್ದಿದೆ.


Spread the love