ಅ.11 : ಮಂಗಳೂರು ಗೋಲಿಬಾರ್ – ಸಾಕ್ಷ್ಯ ಅಥವಾ ಹೇಳಿಕೆಯನ್ನು ನೀಡಲು ಅಂತಿಮ ಅವಕಾಶ

Spread the love

ಅ.11 : ಮಂಗಳೂರು ಗೋಲಿಬಾರ್ – ಸಾಕ್ಷ್ಯ ಅಥವಾ ಹೇಳಿಕೆಯನ್ನು ನೀಡಲು ಅಂತಿಮ ಅವಕಾಶ

ಮಂಗಳೂರು:  ಮಂಗಳೂರು ಪೊಲೀಸ್ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿ ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದವರು ಆ.11ರಂದು ಸಾಕ್ಷಿ ಅಥವಾ ಹೇಳಿಕೆಯನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಹಾಗೂ ಮ್ಯಾಜಿಸ್ಟೀರಿಯಲ್ ತನಿಖಾಧಿಕಾರಿ ಜಿ.ಜಗದೀಶ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ 2019 ರ ಡಿಸೆಂಬರ್ 19ರಂದು ಮಂಗಳೂರು ನಗರ ಪೋಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆದ ಪ್ರತಿಭಟನೆಯ ಸಮಯದಲ್ಲಿ ಗುಂಡೇಟಿನಿಂದ ನೌಶಿನ್ ಹಾಗೂ ಜಲೀಲ್ ಕುದ್ರೋಳಿ ಎಂಬವರು ಮೃತಪಟ್ಟಿರುವ ಬಗ್ಗೆ ಮ್ಯಾಜಿಸ್ಟೀರಿಯಲ್ ವಿಚಾರಣೆ ನಡೆಸಲು ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ, ಉಡುಪಿ ಇವರನ್ನು ಸರಕಾರದ ಆದೇಶ ಸಂಖ್ಯೆ ಹೆಚ್ಡಿ 5 ಪಿಸಿಇ 2019, ಬೆಂಗಳೂರು ಇದರಂತೆ ನೇಮಕ ಮಾಡಿ ಆದೇಶ ಹೊರಡಿಸಲಾಗಿರುತ್ತದೆ.

ಈ ಸಂಬಂಧ ಸದ್ರಿ ದಿನ ಈ ಘಟನೆ ಬಗ್ಗೆ ಮಾಹಿತಿಯುಳ್ಳ ಅಥವಾ ಈ ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದ ಯಾವುದೇ ವ್ಯಕ್ತಿಗಳು ಅಗಸ್ಟ್ 11ರಂದು ಪೂರ್ವಾಹ್ನ 11 ಗಂಟೆಯಿಂದ ಅಪರಾಹ್ನ 1 ಗಂಟೆವರೆಗೆ ಸಹಾಯಕ ಆಯುಕ್ತರ ಕೋರ್ಟ್ ಹಾಲ್, ಮಿನಿ ವಿಧಾನಸೌಧ, ಮಂಗಳೂರು, ಇಲ್ಲಿ ತನ್ನ ಸಮಕ್ಷಮ ಹಾಜರಾಗಿ ಸಾಕ್ಷ್ಯ ಅಥವಾ ಹೇಳಿಕೆಯನ್ನು ನೀಡಲು ಅಂತಿಮ ಅವಕಾಶವನ್ನು ನೀಡಲಾಗಿದೆ. ತದನಂತರ ಸಾರ್ವಜನಿಕರಿಂದ ಯಾವುದೇ ಸಾಕ್ಷ್ಯ ಅಥವಾ ಹೇಳಿಕೆಯನ್ನು ಸ್ವೀಕರಿಸಲಾಗುವುದಿಲ್ಲ ಎಂದು ಉಡುಪಿ ಜಿಲ್ಲಾ ಡಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜಿ. ಜಗದೀಶ ಅವರ ಪ್ರಕಟಣೆ ತಿಳಿಸಿದೆ.


Spread the love