ಆಗಸ್ಟ್ 3: ಮಂಗಳೂರಿನಲ್ಲಿ ‘ಮತ್ತೆ ಕಲ್ಯಾಣ’

Spread the love

ಆಗಸ್ಟ್ 3: ಮಂಗಳೂರಿನಲ್ಲಿ ‘ಮತ್ತೆ ಕಲ್ಯಾಣ’

ಚಿತ್ರದುರ್ಗ ಜಿಲ್ಲೆಯ ಸಾಣೇಹಳ್ಳಿ ಶ್ರೀ ಮಠದ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಸಾರಥ್ಯದಲ್ಲಿ 2019ರ ಆಗಸ್ಟ್ 1ರಿಂದ 30ರ ತನಕ ‘ಮತ್ತೆ ಕಲ್ಯಾಣ’ ಎಂಬ ರಾಜ್ಯ ಮಟ್ಟದ ಜನಾಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ನಾಡಿನ ಪ್ರಮುಖ ಜನಪರ ಸ್ವಾಮೀಜಿಗಳು, ಚಿಂತಕರು, ಪ್ರಗತಿಪರರು, ಸಾಹಿತಿಗಳು, ಕಲಾವಿದರು ಹಾಗೂ ಸಂಘಟಕರ ನ್ನೊಳಗೊಂಡ ಸಲಹಾ ಸಮಿತಿಯಿರುವ ‘ಸಹಮತ ವೇದಿಕೆ’ ಈ ಆಂದೋಲನವನ್ನು ಮುನ್ನಡೆಸುತ್ತಿದೆ.

ಅಭಿಯಾನ ಅಂಗವಾಗಿ ಆಗಸ್ಟ್ 3 ರಂದು ದಿನಪೂರ್ತಿ ‘ಮತ್ತೆ ಕಲ್ಯಾಣ’ದ ಕಾರ್ಯಕ್ರಮಗಳು ಮಂಗಳೂರಿನ ಶ್ರೀ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದ್ದು, ಬೆಳಿಗ್ಗೆ ಗಂ. 11ಕ್ಕೆ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಚಲನ ಚಿತ್ರ ಅಕಾಡೆಮಿಯ ಅಧ್ಯಕ್ಷ ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ ಗಂ. 2.00ರಿಂದ 4.00ರ ತನಕ ಪ.ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ‘ವಚನಗಳು ಮತ್ತು ಸಹಬಾಳ್ವೆ’ ಎಂಬ ವಿಷಯದಲ್ಲಿ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ ನಡೆಯಲಿದೆ.

ಸಾಮರಸ್ಯದ ನಡಿಗೆ: ಸಂಜೆ ಗಂ. 4.30ಕ್ಕೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಪುರಭವನದ ತನಕ ನಡೆಯಲಿರುವ ಸಾಮರಸ್ಯದ ನಡಿಗೆಯಲ್ಲಿ ರಾಮಕೃಷ್ಣ ಮಠದ ಶ್ರೀ ಏಕಗಮ್ಯಾನಂದ ಸ್ವಾಮೀಜಿ, sಸಂದೇಶ ಪ್ರತಿಷ್ಟಾನದ ನಿರ್ದೇಶಕ ಫಾ. ಫ್ರಾನ್ಸಿಸ್ ಅಸಿಸ್ಸಿ ಅಲ್ಮೇಡಾ, ಸಿಓಡಿಪಿ ಸಂಸ್ಥೆಯ ಫಾ. ಓಸ್ವಾಲ್ಡ್ ಮೊಂತೇರೊ, ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಸಿಎಸ್‍ಐ ದಕ್ಷಿಣ ಕರ್ನಾಟಕ ಧರ್ಮ ಪ್ರಾಂತ್ಯದ ಬಿಷಪ್ ವಂದನೀಯ ಮೋಹನ್ ಮನೋರಾಜ್, ಕರ್ನಾಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಕೆ. ಮುಹಮ್ಮದ್, ಬ್ರಹ್ಮಕುಮಾರಿ ವಿಶ್ವೇಶ್ವರಿ ಒಳಗೊಂಡಂತೆ ವಿವಿಧ ಧರ್ಮ, ಜಾತಿಗಳ ಮುಖಂಡರು ಹಾಗೂ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕರಾವಳಿಯ ಸಾಂಸ್ಕøತಿಕ ವೈಭವವನ್ನು ಪ್ರತಿಬಿಂಭಿಸುವ ಕಲಾತಂಡಗಳು ಸಾಮರಸ್ಯದ ನಡಿಗೆಯ ಮೆರುಗನ್ನು ಹೆಚ್ಚಿಸಲಿವೆ.

ಸಂಜೆ ಗಂ. 5.30ಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವಾರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ‘ಸಾರ್ವಜನಿಕ ಸಮಾವೇಶ’ದಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್ ಹಾಗೂ ಪ್ರಾಧ್ಯಾಪಕಿ ಡಾ. ಶುಭಾ ಮರವಂತೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ 7.30ಕ್ಕೆ ‘ಮೋಳಿಗೆ ಮಾರಯ್ಯ’ ನಾಟಕ ಪ್ರದರ್ಶನ ನಡೆಯಲಿದ್ದು, ಬಳಿಕ ಸಾಮೂಹಿಕ ಸಹಭೋಜನದ ವ್ಯವಸ್ಥೆ ಮಾಡಲಾಗಿದೆ.


Spread the love