ಆಟೋ ಚಾಲಕನ ಮೇಲೆ ಹಲ್ಲೆ ಆರೋಪ ಹಿನ್ನೆಲೆ: ಪುತ್ತೂರು ಸಂಚಾರ ಪೊಲೀಸರ ಅಮಾನತು
ಪುತ್ತೂರು : ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡುವ ಕ್ರಮ ಕೈಗೊಳ್ಳಲಾಗಿದೆ.
ಸೋಮವಾರ (17-10-2025) ಸಂಜೆ ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಆಟೋ ಚಾಲಕ ಬಶೀರ್ ಅವರು ಸಮವಸ್ತ್ರ ಧರಿಸಿ ಆಟೋ ಚಾಲನೆ ಮಾಡುತ್ತಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ಎಎಸ್‌ಐ ಚಿದಾನಂದ ರೈ ಹಾಗೂ ಸಿಪಿಸಿ (2283) ಶೈಲ ಎಂ.ಕೆ. ಅವರು ಕೈ ಸನ್ನೆ ಮೂಲಕ ಆಟೋ ನಿಲ್ಲಿಸಲು ಸೂಚಿಸಿದರೂ, ಚಾಲಕ ಬಶೀರ್ ಅವರು ವಾಹನವನ್ನು ನಿಲ್ಲಿಸದೆ ವೇಗವಾಗಿ ಚಲಾಯಿಸಿಕೊಂಡು ಹೋದರು ಎಂದು ವರದಿಯಾಗಿದೆ.
ಮೋಟಾರ್ ವಾಹನ ಕಾಯ್ದೆ ಉಲ್ಲಂಘನೆಯ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಹಿಂಬಾಲಿಸಿ ತಡೆದಾಗ, ಅಲ್ಲಿ ವಾಗ್ವಾದ ಉಂಟಾಗಿ, ಚಾಲಕನಿಗೆ ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದನೆ ನಡೆಸಿ ಕೈಯಿಂದ ಹಲ್ಲೆ ಮಾಡಿದ ಘಟನೆ ನಡೆದಿದೆ ಎನ್ನಲಾಗಿದೆ.
ಈ ಘಟನೆಗೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ, ಉನ್ನತ ಪೊಲೀಸ್ ಅಧಿಕಾರಿಗಳು ಘಟನೆಯನ್ನು ಪರಿಶೀಲಿಸಿದರು. ಪ್ರಾಥಮಿಕ ತನಿಖೆಯ ಬಳಿಕ, ಆರೋಪದ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು, ಎಎಸ್‌ಐ ಚಿದಾನಂದ ರೈ ಹಾಗೂ ಸಿಪಿಸಿ ಶೈಲ ಎಂ.ಕೆ.ರನ್ನು ಕರ್ತವ್ಯದಿಂದ ಅಮಾನತು ಮಾಡುವ ಆದೇಶ ಹೊರಡಿಸಲಾಗಿದೆ.
ಘಟನೆ ಕುರಿತು ಮುಂದಿನ ತನಿಖೆ ನಡೆಯುತ್ತಿದ್ದು, ವರದಿಯ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದಾಗಿದೆ ಎಂದು ಪೊಲೀಸ್ ವೃತ್ತಪರ ಮೂಲಗಳು ತಿಳಿಸಿವೆ.