ಆ್ಯಸಿಡ್ ದಾಳಿ: ಕಠಿಣ ಕ್ರಮಕ್ಕೆ ಉಸ್ತುವಾರಿ ಸಚಿವ  ದಿನೇಶ್ ಗುಂಡೂರಾವ್ ಸೂಚನೆ

Spread the love

ಆ್ಯಸಿಡ್ ದಾಳಿ: ಕಠಿಣ ಕ್ರಮಕ್ಕೆ ಉಸ್ತುವಾರಿ ಸಚಿವ  ದಿನೇಶ್ ಗುಂಡೂರಾವ್ ಸೂಚನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಸರ್ಕಾರಿ ಕಾಲೇಜು ಆವರಣದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಮೂವರು ವಿದ್ಯಾರ್ಥಿನಿಯರ ಮೇಲೆ ದುಷ್ಕರ್ಮಿಯೊಬ್ಬ ಆ್ಯಸಿಡ್ ದಾಳಿ ನಡೆಸಿರುವ ಘಟನೆ ದುರದೃಷ್ಟಕರ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ.

ಜಿಲ್ಲಾ ಪೊಲೀಸರು ಈಗಾಗಲೇ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಮೂವರು ವಿದ್ಯಾರ್ಥಿನಿಯರ ಮುಖಕ್ಕೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಸರ್ಕಾರದಿಂದ ವಿದ್ಯಾರ್ಥಿನಿಯರಿಗೆ ಪರಿಹಾರ ಸೇರಿದಂತೆ ವೈದ್ಯಕೀಯ ಚಿಕಿತ್ಸೆಗೆ ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ.

ಮಹಿಳೆಯರ ಮೇಲಿನ ಆ್ಯಸಿಡ್ ದಾಳಿಯಂತಹ ಅಮಾನವೀಯ ಘಟನೆಗಳು ಖಂಡನೀಯ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.


Spread the love