ಇಂದಿರಾಗಾಂಧಿಗೆ ಪುನರ್ಜನ್ಮ ನೀಡಿದ ಕ್ಷೇತ್ರದಲ್ಲಿ ಕಾಂಗ್ರೆಸ್ ಚಿಹ್ನೆ ಮಾಯ ಪಕ್ಷದ ಅಧೋಗತಿಗೆ ಸಾಕ್ಷಿ – ಶೋಭಾ ಕರಂದ್ಲಾಜೆ

Spread the love

ಇಂದಿರಾಗಾಂಧಿಗೆ ಪುನರ್ಜನ್ಮ ನೀಡಿದ ಕ್ಷೇತ್ರದಲ್ಲಿ ಕಾಂಗ್ರೆಸ್ ಚಿಹ್ನೆ ಮಾಯ ಪಕ್ಷದ ಅಧೋಗತಿಗೆ ಸಾಕ್ಷಿ – ಶೋಭಾ ಕರಂದ್ಲಾಜೆ

ಉಡುಪಿ: ದೇಶವನ್ನಾಳಿದ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಪುನರ್ ಜನ್ಮ ನೀಡಿದ ಚಿಕ್ಕಮಗಳೂರು ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಡುವುದರ ಮೂಲಕ ಈ ಬಾರಿಯ ಮತಯಂತ್ರದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಚಿಹ್ನೆಯೆ ಇಲ್ಲದೆಂತೆ ಮಾಡಿಕೊಂಡಿರುವುದು ಅದರ ಅಸ್ತಿತ್ವವನ್ನು ತೋರಿಸಿದಂತಾಗಿದೆ ಎಂದು ಉಡುಪಿ ಚಿಕ್ಕಮಗಳೂರು- ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದರು.

ಅವರು ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಜಿಲ್ಲೆಯಲ್ಲಿ ಅಸ್ತಿತ್ವವೆ ಇಲ್ಲದ ಜೆಡಿಎಸ್ ಪಕ್ಷಕ್ಕೆ ಸಮ್ಮೀಶ್ರ ಅಭ್ಯರ್ಥಿ ಎನ್ನುವ ನಿಟ್ಟಿನಲ್ಲಿ ಕಾಂಗ್ರೆಸ್ ಈ ಚುನಾವಣೆಯ ಮತಯಂತ್ರದಲ್ಲಿ ತನ್ನ ಪಕ್ಷದ ಚಿಹ್ನೆಯಿಲ್ಲದಂತೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಹಾಗೂ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರು ಒಗ್ಗಟ್ಟಾಗಿ ಸೇರಿ ಕ್ಷೇತ್ರವನ್ನು ಉಳಿಸುಕೊಳ್ಳೂವ ಪ್ರಯತ್ನ ಮಾಡಲಿದ್ದೇವೆ.

ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಬಿಜೆಪಿ ನೇತೃತ್ವದ ಸರಕಾರ ಸಂಪೂರ್ಣ ಅಭಿವೃದ್ಧಿ ಕಾರ್ಯವನ್ನು ಮರೆತು ಟಿಕೇಟ್ ಹಂಚಿಕೆಯ ಕುರಿತು ಪರಸ್ಪರ ಜಗಳದಲ್ಲಿಯೇ ತೊಡಗಿಕೊಂಡಿದೆ. ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮಂತ್ರಿಗಿರಿ, ಖಾತೆಗಾಗಿ ಜಗಳವಾದರೆ ಈಗ ಲೋಕಸಭಾ ಟಿಕೇಟ್ ಗಾಗಿ ಜಗಳ ಮಾಡುವದರಲ್ಲೇ ಕಾಲ ಹರಣ ಮಾಡುತ್ತಿದ್ದಾರೆ. ಈಗಾಗಲೇ ರಾಷ್ಟ್ರದಲ್ಲಿ ಮಾಡಿಕೊಂಡಿರುವ ಘಟಬಂಧನ್ ಸಂಪೂರ್ಣವಾಗಿ ವಿಫಲವಾಗಿದ್ದು ಅದೇ ಫಲಿತಾಂಶ ಉಡುಪಿ-ಚಿಕ್ಕಮಗಳೂರಿನಲ್ಲಿ ಕೂಡ ಪ್ರತಿಧ್ವನಿಸಲಿದೆ ಎಂದರು.

ಉಡುಪಿ – ಚಿಕ್ಕಮಗಳೂರು ಕ್ಷೇತ್ರದಿಂದ ಮತ್ತೊಮ್ಮೆ ಪಕ್ಷದ ನಾಯಕರು ತನಗೆ ಸ್ಪರ್ಧಿಸಲು ಅವಕಾಶವನ್ನು ನೀಡಿದ್ದು, ಮತ್ತೋಮ್ಮೆ ಈ ಕ್ಷೇತ್ರದ ಸೇವೆಯನ್ನು ಮಾಡುವ ಅವಕಾಶ ಲಭಿಸಿದೆ. ಕಳೆದ 5 ವರ್ಷಗಳಲ್ಲಿ ಕ್ಷೇತ್ರಕ್ಕೆ ಹಲವಾರು ಅಭಿವೃದ್ಧಿಪರ ಕೆಲಸಗಳನ್ನು ಮಾಡಲಾಗಿದ್ದು ಮತ್ತೊಮ್ಮೆ ಅದನ್ನು ಮುಂದುವರಿಸಲು ಕ್ಷೇತ್ರದ ಜನತೆ ತನಗೆ ಅವಕಾಶ ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು. ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾರ್ಚ್ 26 ರಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಲಿದ್ದು, ಈ ವೇಳೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭಾಗವಹಿಸಲಿದ್ದಾರೆ. ಮಾರ್ಚ್ 30 ರೊಳಗೆ ಮೀನುಗಾರರ ಸಮಾವೇಶ, ಮಹಿಳಾ ಸಮಾವೇಶಗಳನ್ನು ಮಾಡಲು ನಿರ್ಧರಿಸಲಾಗಿದ್ದು ಬಳಿಕ ಬೂತ್ ಮಟ್ಟದ ಸಭೆಗಳನ್ನು ನಡೆಸಲಾಗುವುದು ಎಂದರು.

ಪ್ರಮೋದ್ ಮಧ್ವರಾಜ್ ಅವರು ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡುವ ಕುರಿತು ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ ಅವರು ಯಾರು ಕೂಡ ಯಾವುದೇ ಪಕ್ಷದಲ್ಲಿ ಸ್ಪರ್ಧೆ ಮಾಡಲು ಸ್ವತಂತ್ರರು ಅವರ ಸ್ಪರ್ಧೆಯ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಸ್ಪರ್ಧೆ ಮಾಡಲು ಸ್ವತಂತ್ರ ಅವಕಾಶ ಇದೆ ಎಂದರು.

ಈ ಬಾರಿಯ ಚುನಾವಣೇಯಲ್ಲಿ ಕಳೆದ ಐದು ವರ್ಷಗಳ ಮೋದಿ ಸರಕಾರದ ಸಾಧನೆ ರಾಜ್ಯದ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ವೈಫಲ್ಯಗಳೇ ಪ್ರಮುಖ ವಿಷಯಗಳಾಗಲಿದೆ. ರಾಜ್ಯದ ಮುಖ್ಯಮಂತ್ರಿ ಕರಾವಳಿಗರು ಬುದ್ದಿಹೀನರು ಮತ್ತು ಮೋದಿಗೆ ಮತಹಾಕುವವರು ಎಂದು ಅವಹೇಳನ ಮಾಡಿದ್ದಾರೆ. ಕರಾವಳಿಯ ಜನರು ದೇಶಭಕ್ತಿಗೆ ಮತ್ತು ದೇಶದ ಅಭಿವೃದ್ದಿಯ ಪರವಾಗಿರುವವರು. ಅವರು ಎಂದೂ ಕೂಡ ಕುಟುಂಬ ರಾಜಕಾರಣ ಮತ್ತು ಕುಟುಂಬದ ಬೆಳವಣಿಗೆ ಮಾಡುವುದಕ್ಕೆ ಬೆಂಬಲ ಸೂಚಿಸುವುದಿಲ್ಲ. ಮೋದಿಗೆ ಪರ್ಯಾಯವಾದ ನಾಯಕ ಇನ್ನೂ ಕೂಡ ರಾಷ್ಟ್ರದಲ್ಲಿ ಇಲ್ಲ ಎನ್ನುವ ಹತಾಶೆಯಿಂದ ಕುಮಾರಸ್ವಾಮಿ ಮಾತನಾಡಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ, ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ಜೀವರಾಜ್, ರಾಜ್ಯ ಬಿಜೆಪಿ ನಾಯಕಿ ಭಾರತಿ ಶೆಟ್ಟಿ, ನಾಯಕರಾದ ಕುತ್ಯಾರು ನವೀನ್ ಶೆಟ್ಟಿ, ಗೀತಾಂಜಲಿ ಸುವರ್ಣ ಹಾಗೂ ಇತರರು ಉಪಸ್ಥಿತರಿದ್ದರು.


Spread the love