ಇಂದಿರಾ ಗಾಂಧಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣ – ಅಭಯಚಂದ್ರ ಜೈನ್

Spread the love

ಇಂದಿರಾ ಗಾಂಧಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣ – ಅಭಯಚಂದ್ರ ಜೈನ್

ಮಂಗಳೂರು: ಇಂದಿರಾ ಗಾಂಧಿ ಅವರು ಹಸಿರು ಕ್ರಾಂತಿ, ಶ್ವೇತ ಕ್ರಾಂತಿ, ನೀಲ ಕ್ರಾಂತಿ, ಜಾತಿ ಪದ್ಧತಿ ನಿರ್ಮೂಲನೆ, ಬ್ಯಾಂಕುಗಳ ರಾಷ್ಟ್ರೀಕರಣ ಜಾರಿಗೊಳಿಸಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾದರು ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಅಭಯಚಂದ್ರ ಜೈನ್ ಹೇಳಿದ್ದಾರೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮದಿನ ಪ್ರಯುಕ್ತ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದಮಲ್ಲಿಕಟ್ಟೆ ಕಾಂಗ್ರೆಸ್ ಭವನದಲ್ಲಿ ಬುಧವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಬಳಿಕ ಅವರು ಮಾತನಾಡುತ್ತಿದ್ದರು.

ಇಂದಿರಾಗಾಂಧಿಯವರು ದೇಶಕೋಸ್ಕರ ಪ್ರಾಣ ತ್ಯಾಗ ಮಾಡಿದ ಧೀಮಂತ ಮಹಿಳೆ. ದೇಶದ ಏಕತೆಯದೃಷ್ಟಿಯಿಂದ ಅವರು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರು. ಬಡತನ ನಿರ್ಮೂಲನೆ ಕಾರ್ಯಕ್ರಮದ ಮೂಲಕ ಜನರನ್ನು ಆರ್ಥಿಕವಾಗಿ ಮೇಲಕ್ಕೆತ್ತುವ ಕೆಲಸ ಮಾಡಿದ್ದರು. ಬ್ಯಾಂಕುಗಳು ರಾಷ್ಟ್ರೀಕರಣವಾಗುವ ಮುನ್ನ ಬಡವರು ಬ್ಯಾಂಕುಗಳ ಮೆಟ್ಟಿಲು ಹತ್ತಲು ಭಯ ಬೀಳುತ್ತಿದ್ದರು. ಶ್ರೀಮಂತರು ಮಾತ್ರ ಬ್ಯಾಂಕ್ ಖಾತೆ, ಸಾಲ, ಠೇವಣಿಗೆ ಅವಕಾಶ ಇತ್ತು. ಇಂದಿರಾ ಗಾಂಧಿಯವರು ರಾಷ್ಟ್ರೀಕರಣ ಮಾಡಿದ ಬಳಿಕ ಬ್ಯಾಂಕುಗಳ ಬಾಗಿಲು ಬಡವರಿಗೂ ತೆರೆಯಿತು. ಸಾಮಾಜಿಕ ಹಾಗೂ ಆರ್ಥಿಕವಾಗಿ ಇದ್ದ ಅಸಮಾನತೆ ಹೋಗಲಾಡಿಸಲು 20 ಅಂಶಗಳ ಕಾರ್ಯಕ್ರಮ ರೂಪಿಸಿದರು. ಭಾರತ ಉಕ್ಕಿನ ಮಹಿಳೆ ಇಂದಿರಾ ಗಾಂಧಿಯವರನ್ನು ಎಂದೂ ಮರೆಯಲು ಸಾಧ್ಯವಿಲ್ಲ ಎಂದು ಸ್ಮರಿಸಿದರು.

ಎಐಸಿಸಿ ಕಾರ್ಯದರ್ಶಿ ಪಿ.ವಿ ಮೋಹನ್ ಮಾತನಾಡಿ, ಇಂದಿರಾ ಗಾಂಧಿ ಅವರು ಸಾಮಾಜಿಕ ನ್ಯಾಯದಿಂದ ವಂಚಿತರಾದ ದುರ್ಬಲ ಜನರ ಪರವಾಗಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದರು. ಬಡಜನರ ಬಗೆಗಿನ ಕಾಳಜಿ, ಅವರ ಸ್ಥಿತಿಗತಿಗಳ ಸುಧಾರಣೆಗಾಗಿ ಕೈಗೊಂಡ ದಿಟ್ಟ ಕ್ರಮಗಳು ಇಂದಿರಾ ಗಾಂಧಿಯವರನ್ನು ಇಂದಿಗೂ ಜೀವಂತವಾಗಿರಿಸಿದೆ ಎಂದರು.

ಈ ಸಂದರ್ಭ ಇಂದಿರಾ ಗಾಂಧಿ ಅವರ ಜೀವನ, ಕೊಡುಗೆ, ಸಾಧನೆ ಕುರಿತು ಐರಿನ್ ರೆಬೆಲ್ಲೊ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹೀಂ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಮೂಡಾ ಅಧ್ಯಕ್ಷ ಸದಾಶಿವ್ ಉಳ್ಳಾಲ್, ರಾಜ್ಯ ಗೇರುನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮುಖಂಡರಾದ ರಮೇಶ್ ಶೆಟ್ಟಿ ಬೋಳಿಯಾರ್, ಪ್ರಕಾಶ್ ಸಾಲ್ಯಾನ್, ಜೋಕಿಂ ಡಿಸೋಜ, ದಿನೇಶ್ ಮುಳೂರು, ನಾರಾಯಣ್ ನಾಯಕ್, ಬಿ.ಎಂ.ಅಬ್ಬಾಸ್ ಅಲಿ, ಸುದರ್ಶನ್ ಜೈನ್, ಬೇಬಿ ಕುಂದರ್, ಡೆನ್ನಿಸ್ ಡಿಸಿಲ್ವ ಮತ್ತಿತರರು ಉಪಸ್ಥಿತರಿದ್ದರು. ಡಿಸಿಸಿ ಉಪಾಧ್ಯಕ್ಷ ಶುಭೋದಯ ಆಳ್ವ ಸ್ವಾಗತಿಸಿದರು. ಎಸ್.ಅಪ್ಪಿ ವಂದಿಸಿದರು.


Spread the love
Subscribe
Notify of

0 Comments
Inline Feedbacks
View all comments