ಇತರ ಧರ್ಮದ ಬಗ್ಗೆ ವಿದ್ಯಾರ್ಥಿ ಜೀವನದಲ್ಲೇ ಅಧ್ಯಯನ ನಡೆಸಬೇಕು: ಶಾಸಕ ಉಮಾನಾಥ ಕೋಟ್ಯಾನ್

Spread the love

ಇತರ ಧರ್ಮದ ಬಗ್ಗೆ ವಿದ್ಯಾರ್ಥಿ ಜೀವನದಲ್ಲೇ ಅಧ್ಯಯನ ನಡೆಸಬೇಕು: ಶಾಸಕ ಉಮಾನಾಥ ಕೋಟ್ಯಾನ್

ಮೂಡಬಿದಿರೆ: ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ಇತರ ಧರ್ಮದ ಆಚಾರ-ವಿಚಾರಗಳನ್ನು ಅಧ್ಯಯನ ನಡೆಸುವ ಮೂಲಕ ಸಮಾಜದಲ್ಲಿ ಶಾಂತಿ-ಸೌಹಾರ್ದತೆಗೆ ಕಾರಣರಾಗಬೇಕು ಎಂದು ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಅಭಿಪ್ರಾಯಿಸಿದರು.

ಪ್ರವಾದಿ ಮುಹಮ್ಮದ್(ಸ): ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ ರಾಜ್ಯವ್ಯಾಪಿ ಸೀರತ್ ಅಭಿಯಾನದ ಭಾಗವಾಗಿ ದ.ಕ. ಜಿಲ್ಲಾ ಸ್ವಾಗತ ಸಮಿತಿಯು ಹೈಸ್ಕೂಲ್ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಸಾಮಾಜಿಕ ಸ್ವಾಸ್ಥ್ಯಕ್ಕೆ ಪರಸ್ಪರ ಧರ್ಮದ ಅರಿವು ಮುಖ್ಯ. ತಾನು ಗೆಲ್ಲಬೇಕೆಂಬ ಅದಮ್ಯ ಆಶಾಭಾವನೆ ಇರಬೇಕು. ಆದರೆ ಇತರರನ್ನು ಸೋಲಿಸಬೇಕೆಂಬ ಚಪಲ ಇರಬಾರದು ಎಂದು ಕಿವಿಮಾತು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಕುರಿಯನ್, ಪರಸ್ಪರ ನಂಬಿಕೆಗಳನ್ನು ಗೌರವಿಸಿ, ತನ್ನ ನಂಬಿಕೆಯಂತೆ ಜೀವನ ಸಾಗಿಸಿ ಮಾನವ ಪ್ರೇಮಿಗಳಾಗಬೇಕು ಎಂದರು.

ವಿಶ್ವಾಸ್ ಬಿಲ್ಡರ್ಸ್ ನ ಅಬುಲ್ ಆಲಾ ಪುತ್ತಿಗೆ ಮಾತನಾಡಿ, ಇಂತಹ ಕಾರ್ಯಕ್ರಮಗಳು ಪರಸ್ಪರರ ನಡುವಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಸಹಕಾರಿ. ಇದು ಸದಾ ಮುಂದುವರಿಯಬೇಕು ಎಂದು ಆಶಿಸಿದರು.

ಅಭಿನಂದನಾ ನುಡಿಗಳನ್ನಾಡಿದ ಶಾಂತಿ ಪ್ರಕಾಶನದ ವ್ಯವಸ್ಥಾಪಕರಾದ ಮುಹಮ್ಮದ್ ಕುಂಞÂ, ಮಾನವ ಘನತೆ ಕಾಪಾಡಬೇಕು. ಸಂಶಯಗಳು ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುತ್ತದೆ. ಆದರ್ಶ ಪುರುಷರನ್ನು ನಿಂದಿಸಿದರೆ ಅವರ ಘನತೆ ಏನೂ ಕಡಿಮೆಯಾಗುವುದಿಲ್ಲ. ನಿಂದಿಸಿದ ವ್ಯಕ್ತಿಯೇ ನಿಂದನೆಗೆ ಗುರಿಯಾಗುತ್ತಾನೆ ಎಂದರು.

ಹೈಸ್ಕೂಲ್ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಆಳ್ವಾಸ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ಮೂಡಬಿದ್ರೆಯ ವಿದ್ಯಾರ್ಥಿ ದೀಕ್ಷಿತ್ ಜಿ.ಎಂ ಪ್ರಥಮ ಹಾಗೂ ಕುಪ್ಪೆಪದವು ಸರಕಾರಿ ಹೈಸ್ಕೂಲಿನ ವಿದ್ಯಾರ್ಥಿನಿ ಪ್ರಕೃತಿ ಹಂಚಿಕೊಂಡರೆ, ದ್ವಿತೀಯ ಬಹುಮಾನವನ್ನು ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆ, ಮೂಡಬಿದ್ರೆ), ತೃತೀಯ ಬಹುಮಾನವನ್ನು ಸುಳ್ಯ ಸೈಂಟ್ ಜೋಸೆಫ್ ಹೈಸ್ಕೂಲ್ ನ ವಿದ್ಯಾರ್ಥಿನಿ ಕೀರ್ತಿ ಹಾಗೂ ಸಮಾಧಾನಕರ ಬಹುಮಾನವನ್ನು ವಿಶ್ವಮಂಗಳ ಇಂಗ್ಲಿಷ್ ಮೀಡಿಯಂನ ವಿದ್ಯಾರ್ಥಿನಿ ಗಾನ ಗೌಷಿಕ್ ಹಾಗೂ ಸಜಿಪನಡು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ನಫೀಸತುಲ್ ಮಿಸ್ರಿಯಾ ಪಡೆದುಕೊಂಡರು.

ಪದವಿ ಪೂರ್ವ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಸುಳ್ಯ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಚರಿಷ್ಮಾ, ಮೂಡಬಿದ್ರೆಯ ಮಹಾವೀರ ಕಾಲೇಜಿನ ವಿದ್ಯಾರ್ಥಿನಿ ರಮ್ಯಾ ದ್ವಿತೀಯ ಬಹುಮಾನವನ್ನು, ತಲಪಾಡಿಯ ಝೀನತ್ ಕಾಲೇಜಿನ ವಿದ್ಯಾರ್ಥಿನಿ ಮರಿಯಂ ಫಹದಿಯಾ ತೃತೀಯ ಬಹುಮಾನ ಪಡೆದರೆ, ಸಮಾಧಾನಕರ ಬಹುಮಾನವನ್ನು ಕುಂಬ್ರ ಸರಕಾರಿ ಕಾಲೇಜಿನ ವಿದ್ಯಾರ್ಥಿನಿ ಫಾತಿಮತ್ ಸಫ್ರೀನಾ ಗಳಿಸಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಾ. ಸಿ.ಪಿ. ಹಬೀಬುರ್ರಹ್ಮಾನ್ ವಹಿಸಿದ್ದರು. ದ.ಕ. ಜಿಲ್ಲಾ ಸ್ವಾಗತ ಸಮಿತಿಯ ಸದಸ್ಯ ಅಮೀನ್ ಅಹ್ಸನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕೆ.ಎಂ.ಶರೀಫ್ ಉಪಸ್ಥಿತರಿದ್ದರು. ಹೈದರ್ ನೀರ್ಕಜೆ ಪ್ರಶಸ್ತಿ ವಿತರಣೆ ನಡೆಸಿಕೊಟ್ಟರು. ಅಮಾನುಲ್ಲಾ ಖಾನ್ ತರೀಕೆರೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


Spread the love