ಉಡುಪಿ: ಅನಧಿಕೃತ ಜಾಹೀರಾತು ಫಲಕ ಅಳವಡಿಕೆ ವಿರುದ್ದ ಕ್ರಮ

Spread the love

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಹಾಲಿ ಅಳವಡಿಸಿರುವ ಹಾಗೂ ಇನ್ನು ಮುಂದೆ ಅಳವಡಿಸಲಾಗುವ ಖಾಯಂ ಹಾಗೂ ತಾತ್ಕಾಲಿಕ ಜಾಹೀರಾತು ಅಳವಡಿಕೆದಾರರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ ಬ್ಯಾನರ್‍ಗಳನ್ನು ರಸ್ತೆ ಬದಿಗಳಲ್ಲಿ ರಸ್ತೆ ವಿಭಾಜಕಗಳಲ್ಲಿ ಖಾಸಗಿ ಕಟ್ಟಡಗಳ ಮೇಲೆ ಅಳವಡಿಸಿರುವ ಎಲ್ಲಾ ಜಾಹಿರಾತು ಫಲಕಗಳಿಗೆ ನಗರಸಭೆಯಿಂದ ಅನುಮತಿ ಪಡೆದು ಅನುಮತಿ ನಂಬ್ರ ಮತ್ತು ಅವಧಿಯನ್ನು ಕಡ್ಡಾಯವಾಗಿ ದಾಖಲಿಸಿ ಅಳವಡಿಸುವಂತೆ ಸೂಚಿಸಲಾಗಿರುತ್ತದೆ. ಆದರೆ ಇತ್ತೀಚೆಗೆ ಹೆಚ್ಚಿನ ಜಾಹಿರಾತುದಾರರು ನಗರಸಭೆಯ ಅನುಮತಿ ನಂಬ್ರ ಮತ್ತು ಅವಧಿ ವಿವರ ದಾಖಲಿಸುತ್ತಿರುವುದು ಕಂಡುಬರುತ್ತಿಲ್ಲ ಹಾಗೂ ಪ್ರಚಾರ ಪಡಿಸುವ ಫಲಕದ ನಿಜವಾದ ಉದ್ದ ಅಗಲದ ವಿಸ್ತೀರ್ಣ ನೀಡುತ್ತಿಲ್ಲ ಮತ್ತು ಜಾಹಿರಾತು ಫಲಕಗಳನ್ನು ನಿಷಿದ್ಧ ವಲಯಗಳಲ್ಲಿ ರಾತ್ರೋ ರಾತ್ರಿ ಅಳವಡಿಸಿರುವುದು ಕಂಡು ಬಂದಿರುತ್ತದೆ.

ಕೆಲವೊಂದು ಖಾಯಂ ಫಲಕ ಅಳವಡಿಕೆದಾರರು ಫೀ ಪಾವತಿಸದೇ ಬಾಕಿ ಇರಿಸಿಕೊಂಡಿದ್ದು ಹಾಗೂ ಕೆಲವು ಫಲಕಗಳಿಗೆ ನಗರಸಭೆಯಿಂದ ಪಡೆದ ಅನುಮತಿ ಪತ್ರ ದಾಖಲಿಸದೇ ಇರುವುದು ಕಂಡು ಬಂದಿರುತ್ತದೆ. ಇವುಗಳನ್ನು ಅನಧಿಕೃತ ಫಲಕಗಳು ಎಂಬುವುದಾಗಿ ತಿಳಿದು ತೆರವುಗೊಳಿಸಲು ಕ್ರಮ ಜರುಗಿಸಲಾಗುವುದು. ಅಂತಹ ಜಾಹೀರಾತುದಾರರು ಕೂಡಲೇ ಅಗತ್ಯ ಫೀ ಪಾವತಿಸಿ ಅನುಮತಿ ಪಡೆದು ಅನುಮತಿ ನಂಬ್ರ ದಾಖಲಿಸಿ ಪ್ರಚುರ ಪಡಿಸುವಂತೆ ಕೂಡ ಸೂಚಿಸಲಾಗಿದೆ. ಹಾಗೂ ಪರ್ಯಾಯೋತ್ಸವದ ಅಂಗವಾಗಿ ಶುಭಾಶಯ, ಅಭಿನಂದನೆ ಸೂಚಿಸಿ ಅಳವಡಿಸಿರುವ ಎಲ್ಲಾ ತಾತ್ಕಾಲಿಕ ಫಲಕಗಳಿಗೆ ಕಡ್ಡಾಯವಾಗಿ ಫೀ ಪಾವತಿಸಿ ಅನುಮತಿ ಪಡೆದುಕೊಳ್ಳತಕ್ಕದ್ದು.

ಅನಧಿಕೃತವಾಗಿ ಅಳವಡಿಸಲಾಗಿರುವ ಎಲ್ಲಾ ಜಾಹೀರಾತು ಫಲಕಗಳನ್ನು ಯಾವುದೇ ಸೂಚನೆ ನೀಡದೆ ನಗರಸಭೆಯಿಂದ ತೆರವುಗೊಳಿಸಿ, ದಂಡನೆಯೊಂದಿಗೆ ತಗಲುವ ಖರ್ಚು ವೆಚ್ಚಗಳನ್ನು ಸಂಬಂಧಿಸಿದವರಿಂದ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ತಪ್ಪಿದಲ್ಲಿ ಕರ್ನಾಟಕ ಓಪನ್ ಪ್ಲೇಸಸ್ ಪ್ರಿವೆನ್‍ಶನ್ ಆಫ್ ಡಿಸ್‍ಫಿಗರ್‍ಮೆಂಟ್ ಕಾಯಿದೆ 1981 ರ ರೀತ್ಯಾ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು ಅದುದರಿಂದ ಎಲ್ಲಾ ಜಾಹೀರಾತುದಾರರು ಕಾನೂನು ಕ್ರಮಕ್ಕೆ ಅವಕಾಶ ನೀಡದೆ ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭಾ ಪೌರಾಯುಕ್ತರು ಪ್ರಕಟಣೆ ಮೂಲಕ ತಿಳಿಸಿರುತ್ತಾರೆ,


Spread the love