ಉಡುಪಿ ಆರ್‌ಟಿಓ ಮನೆ, ಕಚೇರಿಗೆ ಲೋಕಾಯುಕ್ತ ದಾಳಿ| ಐದು ತಂಡಗಳಿಂದ ಐದು ಕಡೆ ಪರಿಶೀಲನೆ: ಅಕ್ರಮ ಆಸ್ತಿಗಳಿಕೆ ಪತ್ತೆ
ಉಡುಪಿ: ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷ್ಮೀ ನಾರಾಯಣ ಪಿ.ನಾಯಕ್ ಅವರ ಕಚೇರಿ, ಮನೆ, ಆಪ್ತರ ಮನೆಗಳ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳಗ್ಗಿನ ಜಾವಾ ಏಕಕಾಲದಲ್ಲಿ ಐದು ಕಡೆ ಗಳಿಗೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ಅಕ್ರಮ ಆಸ್ತಿ ಪಾಸ್ತಿಗಳನ್ನು ಹೊಂದಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಸಂಗ್ರಹಿಸಿದ ಲೋಕಾಯುಕ್ತ ಪೊಲೀಸರು, ಈ ಸಂಬಂಧ ಆರ್‌ಟಿಓ ಲಕ್ಷ್ಮೀನಾರಾಯಣ ನಾಯಕ್ ವಿರುದ್ಧ ಅಕ್ರಮ ಆಸ್ತಿಗಳಿಕೆ ಪ್ರಕರಣವನ್ನು ದಾಖಲಿಸಿಕೊಂಡಿ ದ್ದಾರೆ. ಮಂಗಳೂರು ಪ್ರಭಾರ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖಾಧಿ ಕಾರಿ ಉಡುಪಿ ಲೋಕಾಯುಕ್ತ ಪ್ರಭಾರ ಡಿವೈಎಸ್ಪಿ ಮಂಜುನಾಥ ನೇತೃತ್ವದಲ್ಲಿ ಮಂಗಳೂರು ಡಿವೈಎಸ್ಪಿ ಗಾನ ಪಿ.ಕುಮಾರ್, ಕಾರವಾರ ಡಿವೈಎಸ್ಪಿ ಧನ್ಯ ನಾಯಕ್, ಪೊಲೀಸ್ ನಿರೀಕ್ಷಕರುಗಳಾದ ರಾಜೇಂದ್ರ ನಾಯ್ಕ ಎಂ.ಎನ್., ಚಂದ್ರಶೇಖರ್ ಕೆ.ಎನ್., ಭಾರತಿ, ರವಿ ಎನ್.ಎನ್. ಹಾಗೂ ಸಿಬ್ಬಂದಿ ಯವರನ್ನು ಒಳಗೊಂಡ ಒಟ್ಟು 5 ತಂಡ ಈ ದಾಳಿ ನಡೆಸಿದೆ.
ಆರ್‌ಟಿಓಗೆ ಸಂಬಂಧಿಸಿದ ವಾಸ್ತವ್ಯದ ಮನೆ, ಸಂಬಂಧಿಕರ ಮನೆ, ಆಪ್ತ ರವಿ ಶೇರಿಗಾರ್ ಮನೆ ಮತ್ತು ಆರ್‌ಟಿಓ ಕಛೇರಿ ಸೇರಿದಂತೆ ಒಟ್ಟು 5 ಕಡೆಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದ್ದು ಶೋಧನಾ ಕಾರ್ಯವು ರಾತ್ರಿಯವರೆಗೂ ಮುಂದುವರೆದಿದೆ.
ಈವರೆಗೆ ನಡೆಸಲಾದ ಶೋಧ ಕಾರ್ಯದಲ್ಲಿ 2 ಮನೆಗಳು, ವಿವಿಧ ಸರ್ವೆ ನಂಬರಗಳಲ್ಲಿ 3 ನಿವೇಶನ, ಚಿನ್ನ, ಬೆಳ್ಳಿ, ಗೃಹೋಪಯೋಗಿ ವಸ್ತುಗಳು ಹಾಗೂ ಬ್ಯಾಂಕ್ ಖಾತೆಗಳಲ್ಲಿರುವ ಒಟ್ಟು ಮೌಲ್ಯ ಸೇರಿದಂತೆ ಒಟ್ಟು ಅಂದಾಜು 2,21,14,234ರೂ. ಕಂಡು ಬಂದಿದ್ದು ಶೇ.133.31ರಷ್ಟು ಅಕ್ರಮ ಆಸ್ತಿಪಾಸ್ತಿಗಳಿರುವುದು ಪತ್ತೆಯಾಗಿದೆ.
ತನಿಖೆ ಮುಂದುವರೆದಿದ್ದು, ಆರ್‌ಟಿಓ ಹೊಂದಿರುವ 1 ಬ್ಯಾಂಕ್ ಲಾಕರ್, ಆಸ್ತಿ-ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಹಾಗೂ ದಾಖಲೆಗಳ ಪರಿಶೀಲನಾ ಕಾರ್ಯ ಹಾಗೂ ಸಂಬಂಧಪಟ್ಟ ಇನ್ನು ಹೆಚ್ಚಿನ ಸ್ಥಳಗಳ ಮಾಹಿತಿ ಸಂಗ್ರಹಣೆ ಮುಂದುವರೆದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.