ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಹೆಸರಿನಲ್ಲಿ ನಕಲಿ ವಾಟ್ಸ್ಯಾಪ್ ಖಾತೆ ಸೃಷ್ಠಿ!

Spread the love

ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಹೆಸರಿನಲ್ಲಿ ನಕಲಿ ವಾಟ್ಸ್ಯಾಪ್ ಖಾತೆ ಸೃಷ್ಠಿ!

ಉಡುಪಿ: ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಹೆಸರಿನಲ್ಲಿ ನಕಲಿ ವಾಟ್ಸ್ಯಾಪ್ ಖಾತೆ ಸೃಷ್ಠಿಸಿ ಹಣಕ್ಕಾಗಿ ಸಂದೇಶ ಕಳುಹಿಸುತ್ತಿರುವ ಕುರಿತು ಜಿಲ್ಲಾಧಿಕಾರಿಗಳು ಉಡುಪಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಕುರಿತು ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಜಿಲ್ಲಾಧಿಕಾರಿ ಬರೆದುಕೊಂಡಿದ್ದು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು, ನಕಲಿ ಖಾತೆಗಳನ್ನು ಸೃಜಿಸಿ ಹಣ ಕೇಳುತ್ತಿರುವ ಘಟನೆಗಳು ನಡೆಯುತ್ತಿದ್ದು Dr K VidyaKumari IAS,DC ಎಂದು Whatsapp ನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿ ಸಂದೇಶಗಳನ್ನು ಕಳುಹಿಸುತ್ತಿರುವುದು ಹಾಗೂ ಹಣ ಕೇಳುತ್ತಿರುವ ವಿಚಾರವು ಗಮನಕ್ಕೆ ಬಂದಿರುತ್ತದೆ.
ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಣ ಕೇಳುವ ಸಂದೇಶಗಳು ಸ್ವೀಕೃತವಾದಲ್ಲಿ ಅದಕ್ಕೆ ಸ್ಪಂದಿಸದೇ ಕೂಡಲೇ ಅಗತ್ಯ ಮಾಹಿತಿಯೊಂದಿಗೆ ಸ್ಥಳೀಯ ಠಾಣಾಧಿಕಾರಿಯವರಿಗೆ ದೂರು ನೀಡುವಂತೆ ಕೋರಿದೆ ಎಂದು ಹೇಳಿದ್ದಾರೆ.
ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು ‘ದುಷ್ಕರ್ಮಿಗಳು ತನ್ನ ಹೆಸರನ್ನು ಬಳಸಿದ್ದು, ಆದರೆ ಅದರಲ್ಲಿ ಇರುವ ಮೊಬೈಲ್ ಸಂಖ್ಯೆ ನನ್ನದಲ್ಲ. ಅದೇ ರೀತಿ ನನ್ನ ಖಾತೆಗೆ ಶಿವಮೊಗ್ಗ ಜಿಲ್ಲಾಧಿಕಾರಿಗಳ ಫೋಟೋವನ್ನು ಬಳಸಿಕೊಳ್ಳಲಾಗಿದೆ. ದುಷ್ಕರ್ಮಿಗಳು ಹಣ ಕಳುಹಿಸುವಂತೆ ಕೆಲವು ತಹಶೀಲ್ದಾರ್ಗಳಿಗೆ ಸಂದೇಶ ಕಳುಹಿಸಿದ್ದಾರೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ತಿಳಿಸಿದ್ದಾರೆ.


Spread the love