ಉಡುಪಿ ಜಿಲ್ಲೆಯಲ್ಲಿ ಎನ್.ಎಸ್.ಯು.ಐ ‘ಬೆಹತರ್ ಭಾರತ್’ಅಭಿಯಾನಕ್ಕೆ ಚಾಲನೆ

Spread the love

ಉಡುಪಿ ಜಿಲ್ಲೆಯಲ್ಲಿ ಎನ್.ಎಸ್.ಯು.ಐ ‘ಬೆಹತರ್ ಭಾರತ್’ ಅಭಿಯಾನಕ್ಕೆ ಚಾಲನೆ

ಉಡುಪಿ: ವಿದ್ಯಾರ್ಥಿ ಸಮುದಾಯವನ್ನು ಒಗ್ಗೂಡಿಸುವ ಸಲುವಾಗಿ ‘ಬೆಹತರ್ ಭಾರತ್’ (ಉತ್ತಮ ಭಾರತ) ಎಂಬ ಅಭಿಯಾನವನ್ನು ಕಾಂಗ್ರೆಸ್ ಹಮ್ಮಿಕೊಂಡಿದ್ದು, ಅದರ ಭಾಗವಾಗಿ ಉಡುಪಿ ಜಿಲ್ಲೆಯಲ್ಲಿ ಎನ್.ಎಸ್.ಯು.ಐ ವತಿಯಿಂದ ಅಭಿಯಾನಕ್ಕೆ ಚಾಲನೆ ಕಾರ್ಯಕ್ರಮ ಶುಕ್ರವಾರ ಜರುಗಿತು.

ಪೋಸ್ಟರ್ ಬಿಡುಗಡೆಯನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ ನೆರವೇರಿಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಿದ್ಯಾರ್ಥಿ ಸಮುದಾಯಕ್ಕೆ ಅಗತ್ಯವಿರುವ ವಿಚಾರಗಳನ್ನು ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಅಳವಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ ಸಮುದಾಯದಿಂದ ಅಭಿಪ್ರಾಯ ಸಂಗ್ರಹ ಕಾರ್ಯಕ್ರಮವನ್ನು ಆಯೋಜಿಸಿದ್ದು ಉಡುಪಿ ಜಿಲ್ಲೆಯಲ್ಲೂ ಸಹ ಕಾಂಗ್ರೆಸ್ಸಿನ ವಿದ್ಯಾರ್ಥಿ ಘಟಕವಾದ ಎನ್ಎಸ್ಯುಐ ಮೂಲಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಅಭಿಪ್ರಾಯ ಸಂಗ್ರಹಕ್ಕೆ ಕಾಂಗ್ರೆಸ್ ಉದ್ದೇಶಿಸಿದೆ ಎಂದರು.

ಉಡುಪಿ ಜಿಲ್ಲಾ ಎನ್.ಎಸ್.ಯು.ಐ ಅಧ್ಯಕ್ಷ ಕ್ರಿಸ್ಟನ್ ಆಲ್ಮೇಡಾ ಅವರು ‘ಬೆಹತರ್ ಭಾರತ್’ (ಉತ್ತಮ ಭಾರತ) ಕಲ್ಪನೆಯು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಕನಸಾಗಿದ್ದು ‘ವಿದ್ಯಾರ್ಥಿಗಳೇ ನಿಜವಾದ ರಾಷ್ಟ್ರ ನಿರ್ಮಾತೃಗಳು. ವಿಜ್ಞಾನ, ತಂತ್ರಜ್ಞಾನ, ಕಲೆ ಹಾಗೂ ಸಂಸ್ಕೃತಿ ಕ್ಷೇತ್ರದಲ್ಲಿ ದೇಶ ಮುನ್ನಡೆಯಬೇಕೆ ಹೊರತು ಯುದ್ಧದತ್ತಲ್ಲ. ವಿಚಾರವಾದ ಹಾಗೂ ನ್ಯಾಯವನ್ನು ಅಪ್ಪಿಕೊಳ್ಳುವ ಮೂಲಕ ಸಮಾಜಗಳು ಮುಂದುವರಿಯುತ್ತವೆ. ಭಾರತದಲ್ಲಿನ ವಿದ್ಯಾರ್ಥಿಗಳು ಈ ಪ್ರಗತಿಪರ ಮುನ್ನಡೆಯ ಮುಂಚೂಣಿಯಲ್ಲಿದ್ದು ಈ ಪ್ರಯುಕ್ತ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ದುಬಾರಿ ಶುಲ್ಕ ಹಾಗೂ ಸೀಮಿತ ಸೀಟುಗಳಿಗೆ ಕಠಿಣ ಸ್ಪರ್ಧೆಯ ಕುರಿತಾದ ಕಳವಳಗಳ ಬಗ್ಗೆ, ಮುಂಬರುವ ಲೋಕಸಭಾ ಚುನಾವಣೆಗೆ ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಚುನಾವಣಾ ಪ್ರಣಾಳಿಕ ಯಾವ ರೀತಿಯಲ್ಲಿ ಆದ್ಯತೆ ನೀಡಬೇಕು ಎಂಬ ಕುರಿತು ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ವೇದಿಕೆ ಕಲ್ಪಿಸುವುದಕ್ಕಾಗಿ ಕಾಂಗ್ರೆಸ್ ಪಕ್ಷ ‘ಬೆಹತರ್ ಭಾರತ್’ ಅಭಿಯಾನ ಪ್ರಾರಂಭಿಸಿದೆ. ವಿದ್ಯಾರ್ಥಿಗಳು ತಮ್ಮ ಕಳವಳಗಳನ್ನು ಆದ್ಯತೆಗಳನ್ನು ಈ ಮೂಲಕ ತಿಳಸುವುದರಿಂದ ಅದಕ್ಕೆ ಪೂರಕವಾಗಿ ಪ್ರಣಾಳಿಕೆ ರಚಿಸಲು ಸಾಧ್ಯವಾಗಲಿದೆ ಎಂದರು.

ಎನ್.ಎಸ್.ಯು.ಐ ಕೋಟ ಬ್ಲಾಕ್ ಅಧ್ಯಕ್ಷ ಗಣೇಶ್, ಪದಾಧಿಕಾರಿಗಳಾದ ದೀಕ್ಷೀತ್, ಹರ್ಶಿತ್, ದೇವದಾಸ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love