ಉಡುಪಿ ಜಿಲ್ಲೆಯಲ್ಲಿ ನರೇಗಾ ಕಾಮಗಾರಿ ಹೆಚ್ಚಿಸಿ: ಕೃಷ್ಣ ಭೈರೇಗೌಡ

Spread the love

ಉಡುಪಿ ಜಿಲ್ಲೆಯಲ್ಲಿ ನರೇಗಾ ಕಾಮಗಾರಿ ಹೆಚ್ಚಿಸಿ: ಕೃಷ್ಣ ಭೈರೇಗೌಡ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ವಿವಿಧ ಇಲಾಖೆಗಳಲ್ಲಿ ಕಾಮಗಾರಿಗಳನ್ನು ತೀವ್ರಗೊಳಿಸುವಂತೆ ರಾಜ್ಯದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ , ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.

ಅವರು ಸೋಮವಾರ ಕಾಪು ಪುರಸಭೆ ಸಭಾಂಗಣದಲ್ಲಿ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಜಿಲ್ಲಾ ಪ್ರಗತಿ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನರೇಗಾ ಯೋಜನೆಯಡಿಯಲ್ಲಿ ಹಲವು ರಚನಾತ್ಮಕ ಕೆಲಸಗಳನ್ನು ಕೈಗೊಳ್ಳಲು ಅವಕಾಶವಿದೆ, ಇದರಿಂದ ಸಾಕಷ್ಟು ಮಾನವ ದಿನದ ಉತ್ಪಾದನೆಯಾಗಲಿದೆ, ರೈತರ ಕೃಷಿ ಗದ್ದೆ ತೋಟಗಳನ್ನು ಅಭಿವೃದ್ದಿ ಪಡಿಸಲು ಸಹ ಸಾಧ್ಯವಿದೆ, ಉಡುಪಿ ಜಿಲ್ಲೆಯಲ್ಲಿ ನರೇಗಾ ಯೋಜನೆಯ ಪ್ರಗತಿ ನಿರೀಕ್ಷಿತವಾಗಿಲ್ಲ ಎಂದು ಸಚಿವರು ಅಸಮಾದಾನ ವ್ಯಕ್ತಪಡಿಸಿದರು.

ನರೇಗಾ ಯೋಜನೆಯಡಿ ಜಿಲ್ಲೆಯ 210 ಶಾಲೆಗಳ ಕಾಂಪೌಂಡ್ ನಿರ್ಮಿಸಲು ಕ್ರಿಯಾಯೋಜನೆ ಸಿದ್ದವಾಗಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಮತ್ತು ಜಿಲ್ಲಾ ಪಂಚಾಯತ್ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಿ ತ್ವರಿತವಾಗಿ ಕಾಮಗಾರಿ ಕೈಗೊಳ್ಳುವಂತೆ ಸಚಿವರು ಸೂಚಿಸಿದರು.
ಅಂಗನವಾಡಿಗಳ ಕಾಂಪೌಂಡ್ ನಿರ್ಮಾಣ ಮಾಡಲು ಸಹ ನರೇಗಾದಲ್ಲಿ ಅವಕಾಶವಿದ್ದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕಾರ್ಯ ನಿರ್ವಹಿಸಿ, ನಗರ ಪ್ರದೇಶದಲ್ಲಿ ಅಂಗನವಾಡಿಗೆ ಕಟ್ಟಡ ಇಲ್ಲವಾದಲ್ಲಿ ಸರ್ಕಾರಿ ಶಾಲೆಗಳಲ್ಲಿ ಖಲಿ ಇರುವ ಕೊಠಡಿಗಳನ್ನು ಬಳಸಿಕೊಳ್ಳುವಂತೆ ಕೃಷ್ಣ ಭೈರೇಗೌಡ ಹೇಳಿದರು.

ನರೇಗಾ ದಲ್ಲಿ ದನದ ಕೊಠಡಿ ನಿರ್ಮಾಣಕ್ಕೆ 19000 ರೂ ಅನುದಾನ ಲಭ್ಯವಿದ್ದು, ಈ ಬಗ್ಗೆ ರೈತರಿಗೆ ಗ್ರಾಮ ಪಂಚಾಯತ್ಗಳು ಮಾಹಿತಿ ನೀಡಿ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ಮಾಹಿತಿ ನೀಡುವಂತೆ ಸಚಿವರು ತಿಳಿಸಿದರು.

ತೋಟಗಾರಿಕಾ ಇಲಾಖೆಯಿಂದ ರೈತರ ತೋಟಗಳಲ್ಲಿ ವಿವಿಧ ಅಭಿವೃದ್ದಿ ಚಟುವಟಿಕೆಗಳನ್ನು ಕೈಗೊಳ್ಳಲು ಅವಕಾಶವಿದ್ದು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಗ್ರಾಮೀಣ ಮಟ್ಟದಲ್ಲಿ ಹೆಚ್ಚಿನ ಪ್ರಚಾರ ನೀಡಿ ನಿಗಧಿತ ಗುರಿ ಸಾಧಿಸುವಂತೆ ಕೃಷ್ಣ ಭೈರೇಗೌಡ ಹೇಳಿದರು.

ನರೇಗಾ ಯೋಜನೆ ಇನ್ನಷ್ಟು ಯಶಸ್ವಿಗೊಳಿಸುವ ಉದ್ದೇಶದಿಂದ ಪಿಡಿಓಗಳು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಲು ಜಿಲ್ಲಾ ಪಂಚಾಯತ್ ವತಿಯಿಂದ ಕಾರ್ಯಗಾರ ನಡೆಸುವಂತೆ ಸಚಿವರು ಸೂಚಿಸಿದರು.

ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ನಿರ್ಮಾಣವಾದ ರಸ್ತೆಗಳನ್ನು 5 ವರ್ಷಗಳ ಕಾಲ ಸಂಬಂದಪಟ್ಟ ಗುತ್ತಿಗೆದಾರರೇ ನಿರ್ವಹಿಸಬೇಕಾಗಿದ್ದು, ಈಗಾಗಲೇ ಜಿಲ್ಲೆಯಲ್ಲಿ ಹಾನಿಯಾಗಿರುವ ರಸ್ತೆಗಳ ಪಟ್ಟಿಮಾಡಿ ಗುತ್ತಿಗೆದಾರರಿಂದ ದುರಸ್ಥಿ ಮಾಡಿಸುವಂತೆ ಸೂಚಿಸಿದ ಸಚಿವರು, ಜಿಲ್ಲೆಯಲ್ಲಿ ದುರಸ್ಥಿಯಾಗಲು ಸಾದ್ಯವಾಗದ ಪ್ರಮುಖ ರಸ್ತೆಗಳಲ್ಲಿ, ಹೊಸ ರಸ್ತೆ ನಿರ್ಮಿಸುವ ಕುರಿತಂತೆ ಕ್ರಿಯಾ ಯೋಜನೆ ಸಿದ್ದಪಡಿಸಿ , ಶಾಸಕರ ಟಾಸ್ಟ್ ಫೋಸ್ ್ ಮೂಲಕ ಕ್ರಿಯಾ ಯೋಜನೆ ಸಲ್ಲಿಸಿ, ರಸ್ತೆ ನಿರ್ಮಾಣಕ್ಕೆ ಸಾಕಷ್ಟು ಅನುದಾನ ಲಭ್ಯವಿದೆ, ಕ್ರಿಯಾಯೋಜನೆಗೆ ಮಂಜೂರಾತಿ ಪಡೆದು, ಮಳೆಗಾಲ ಮುಗಿದ ನಂತರ ಕಾಮಗಾರಿ ಪ್ರಾರಂಭಿಸಿ ಎಂದು ಹೇಳಿದರು.

ಗ್ರಾಮ ಪಂಚಾಯತ್ ಗಳಲ್ಲಿ ತೆರಿಗೆ ಸಂಗ್ರಹಣೆ ಸುಧಾರಿಸಬೇಕಿದೆ, ಈ ಬಗ್ಗೆ ಪಿಡಿಓ ಗಳು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವಂತೆ ಸಚಿವರು ತಿಳಿಸಿದರು.

ಸಭೆಯಲ್ಲಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಉಡುಪಿ ಶಾಸಕ ರಘುಪತಿ ಭಟ್, ಕಾರ್ಕಳ ಶಾಸಕ ಸುನೀಲ್ ಕುಮಾರ್, ಜಿಲ್ಲಾ ಪಂಚಾಯತ್ ಅದ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ , ಜಿಲ್ಲಾ ಪಂಚಾಯತ್ ಸಿಇಓ ಶಿವಾನಂದ ಕಾಪಶಿ ಮತ್ತಿತರರು ಉಪಸ್ಥಿತರಿದ್ದರು.


Spread the love