ಉಡುಪಿ ಜಿಲ್ಲೆಯಲ್ಲಿ ರಿಂಗ್ ರೋಡ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿ: ಎಂ.ಮಹೇಶ್ವರ್ ರಾವ್

Spread the love

ಉಡುಪಿ ಜಿಲ್ಲೆಯಲ್ಲಿ ರಿಂಗ್ ರೋಡ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿ: ಎಂ.ಮಹೇಶ್ವರ್ ರಾವ್

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ರಿಂಗ್ ರೋಡ್ಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು, ಸರ್ವೆ ನಡೆಸಿ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಹಾಗೂ ಜಿಲ್ಲೆಯಲ್ಲಿ ಮೀನುಗಾರಿಕಾ ಕಾಲೇಜು ಸ್ಥಾಪನೆಗೆ ಜಾಗ ಗುರುತಿಸುವಿಕೆ ಪ್ರಕ್ರಿಯೆ ನಡೆಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರಿಗೆ ಸರಕಾರದ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ. ಮಹೇಶ್ವರ ರಾವ್ ಸೂಚಿಸಿದರು.

ಅವರು ಗುರುವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಡುಪಿ ಜಿಲ್ಲೆಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.

ಉಡುಪಿ ಜಿಲ್ಲೆಯಲ್ಲಿ ಸುಗಮ ಸಂಚಾರಕ್ಕೆ ರಿಂಗ್ರೋಡ್ನ ಅವಶ್ಯಕತೆ ಇದೆ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ತಿಳಿಸಿದಾಗ, ರಿಂಗ್ರೋಡ್ ನಿರ್ಮಿಸಲು ಸರ್ವೆ ನಡೆಸಿ, ವಿಸ್ತೃತ ಯೋಜನಾ ವರದಿ ಸಿದ್ದಪಡಿಸಲು ಮತ್ತು ಮಂಗಳೂರು ವಿಮಾನ ನಿಲ್ದಾಣಕ್ಕೆ ಶೀಘ್ರವಾಗಿ ತಲುಪಲು ಅನುಕೂಲವಾಗುವಂತೆ ಅತ್ರಾಡಿಯಿಂದ ಬಜಪೆ ವಿಮಾನ ನಿಲ್ದಾಣದವರೆಗಿನ ರಸ್ತೆಯನ್ನು ಮೆಲ್ದರ್ಜೆಗೇರಿಸುವ ಪ್ರಸ್ತಾವನೆಯ ನೀಲ ನಕಾಶೆ ತಯಾರಿಸಲು ಮಹೇಶ್ವರ ರಾವ್ ಸೂಚಿಸಿದರು.

ಜಿಲ್ಲೆಯಲ್ಲಿ ಕೃಷಿ, ಹೈನುಗಾರಿಕೆ, ತೋಟಗಾರಿಕೆ ಮತ್ತು ಮೀನುಗಾರಿಕೆ ಇಲಾಖೆಗಳು ಜಂಟಿಯಾಗಿ ಸಮಾಲೋಚನೆ ನಡೆಸಿ ಸಮಗ್ರ ಕೃಷಿಯನ್ನು ಉತ್ತೇಜಿಸಲು ಸಹಾಯವಾಗುವ ಮೂಲ ಸೌಕರ್ಯಕ್ಕೆ ಬೇಕಾದ ಅವಶ್ಯಕತೆಗಳನ್ನು ಪಟ್ಟಿ ಮಾಡಿ ನೀಡುವಂತೆ ಸೂಚಿಸಿದ ಉಸ್ತುವಾರಿ ಕಾರ್ಯದರ್ಶಿ, ಮೀನುಗಾರಿಕಾ ಕಾಲೇಜು ಸ್ಥಾಪನೆ ಮಾಡಲು ಜಾಗದ ಲಭ್ಯತೆ ಇದ್ದರೆ ಸರಕಾರದ ಗಮನಕ್ಕೆ ತರಲು ಸೂಚಿಸಿದರು.

ಮಳೆಯಿಂದಾಗಿ ಹಾನಿಗೊಳಗಾದ ಮನೆ, ಕೃಷಿ ಮತ್ತು ತೋಟಗಾರಿಕಾ ಬೆಳಗಳ ಮಾಹಿತಿಯನ್ನು ಅಧಿಕಾರಿಗಳು ಉಸ್ತುವಾರಿ ಕಾರ್ಯದರ್ಶಿಯವರಿಗೆ ನೀಡಿ, ಜಿಲ್ಲೆಯಲ್ಲಿ ಒಟ್ಟು 70 ಮನೆಗಳು ಸಂಪೂರ್ಣ ಹಾನಿಗೊಳಗಾಗಿದ್ದು, ಇದರಲ್ಲಿ 16 ಮಂದಿ ಹೊಸದಾಗಿ ಮನೆ ನಿರ್ಮಿಸಲು ಮುಂದೆ ಬಂದಿದ್ದು, ಈ ಮನೆಗಳ ಜಿ.ಪಿ.ಎಸ್ ಸರ್ವೆ ಕಾರ್ಯ ನಡೆದಿರುತ್ತದೆ, ಭಾಗಶಃ ಹಾನಿಗೀಡಾದ ಮನೆಗಳಿಗೆ ರಿಪೇರಿಗಾಗಿ 1 ಲಕ್ಷ ಪರಿಹಾರ ಧನವನ್ನು ನೀಡಲಾಗಿದೆ ಎಂದರು.

ಜಿಲ್ಲೆಯಲ್ಲಿ 10 ಹೆಕ್ಟೇರ್ ಪ್ರದೇಶದಲ್ಲಿ ಗೇರು ಕೃಷಿ ಬೆಳೆಯಲು ಕ್ರಿಯಾಯೋಜನೆ ತಯಾರಿಸಲಾಗಿದ್ದು, 2020-21 ನೇ ಸಾಲಿನ ಕ್ರಿಯಾ ಯೋಜನೆ ತಯಾರಿ ಪ್ರಕ್ರಿಯೆ ನಡೆಯುತ್ತಿದೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದಾಗ, ಗೇರು ಕೃಷಿಯನ್ನು ಉತ್ತೇಜಿಸಲು ಹೆಚ್ಚಿನ ಪ್ರಮಾಣದಲ್ಲಿ ಫಲಾನುಭವಿಗಳನ್ನು ಗುರುತಿಸಿ ಸರಕಾರ ನಿಗದಿ ಪಡಿಸಿರುವ ಪೆÇ್ರೀತ್ಸಾಹ ಧನವನ್ನು ಸಂಪೂರ್ಣವಾಗಿ ನೀಡಲು ಸೂಚಿಸಿದರು.

ಪ್ರಧಾನಮಂತ್ರಿ ಆವಾಸ ಯೋಜನೆಯಲ್ಲಿ 50 ಮನೆಗಳಿಗೆ ಅನುಮೋದನೆ ದೊರೆತಿದ್ದು, 3 ಮನೆಗಳಿಗೆ ಅನುಮತಿ ನೀಡಲಾಗಿದೆ, ನಿರ್ಮಿತಿ ಕೇಂದ್ರದಲ್ಲಿ 2018-19 ನೇ ಸಾಲಿನಲ್ಲಿ 174 ಕಟ್ಟಡ ನಿರ್ಮಾಣ ಕಾರ್ಯಗಳಿಗೆ ಅನುಮೋದನೆ ಇದ್ದು, ಇದರಲ್ಲಿ 40 ಕಾಮಗಾರಿಗಳು ಪೂರ್ಣವಾಗಿದ್ದು 81 ಪ್ರಗತಿಯಲ್ಲಿದೆ, ಬಾಕಿ ಉಳಿದಿರುವ ಕಾಮಗಾರಿಗಳನ್ನು ಜನವರಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕೋಟ ಪರಿಸರದಲ್ಲಿ ಸಬ್ಸ್ಟೇಷನ್ ನಿರ್ಮಾಣಕ್ಕೆ ಜಾಗದ ಕೊರತೆಯ ಸಮಸ್ಯೆಯನ್ನು ಮೆಸ್ಕಾಂ ಅಧಿಕಾರಿಗಳು ಕಾರ್ಯದರ್ಶಿಗಳ ಗಮನಕ್ಕೆ ತಂದಾಗ, ಕೋಟದ ಅಕ್ಕಪಕ್ಕದ ಊರಿನಲ್ಲಿ ಸರಕಾರಿ ಜಾಗವಿದ್ದರೆ ಅಲ್ಲಿ ಸಬ್ಸ್ಟೇಷನ್ ನಿರ್ಮಿಸುವಂತೆ ಕಾರ್ಯದರ್ಶಿಗಳು ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿ ಬಗ್ಗೆ ಹೆದ್ದಾರಿ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲು ಅವರನ್ನು ಸಭೆಗೆ ಕರೆದರೂ ಅಧಿಕಾರಿಗಳು ನಿರ್ಲಕ್ಷ ತೋರುತ್ತಿರುವುದರ ಬಗ್ಗೆ ಕಾರ್ಯದರ್ಶಿಗಳ ಬಳಿ ಸಮಸ್ಯೆ ಹೇಳಿಕೊಂಡಾಗ, ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸದಿದ್ದಲ್ಲಿ ಗುತ್ತಿಗೆದಾರರ ಒಪ್ಪಂದವನ್ನು ಅಂತ್ಯಗೊಳಿಸಿ ಹೊಸ ಗುತ್ತಿಗೆದಾರರಿಗೆ ಟೆಂಡರ್ ವಹಿಸುವಂತೆ ಸೂಚಿಸಿದರು.

ಅಂಗನವಾಡಿ ಕಾರ್ಯಕ್ರಮಗಳು, ಕುಡಿಯುವ ನೀರು, ರಸ್ತೆ ಕಾಮಗಾರಿ, ಪ್ರವಾಸೋದ್ಯಮ, ಗ್ರಾಮೀಣಾಭಿವೃದ್ದಿ, ಆರೋಗ್ಯ ಮತ್ತು ಶಿಕ್ಷಣ ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆ ನಡೆಸಿ, ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಉಸ್ತುವಾರಿ ಕಾರ್ಯದರ್ಶಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೆÇೀಲೀಸ್ ಅಧೀಕ್ಷಕಿ ನಿಶಾ ಜೇಮ್ಸ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಕಮಲ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.


Spread the love