ಉಡುಪಿ: ನಗರಸಭೆ ಶೌಚಾಲಯ ನಿರ್ಮಾಣಕ್ಕಾಗಿ ಅರ್ಜಿ ಆಹ್ವಾನ

Spread the love

ಉಡುಪಿ, : ರಾಷ್ಟ್ರಪಿತ ಮಹಾತ್ಮಾ ಗಾಂಧಿರವರ 150 ನೇ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಉಡುಪಿ ನಗರಸಭೆ ಬಯಲು ಮಲ ವಿಸರ್ಜನೆಯನ್ನು ಸಂಪೂರ್ಣವಾಗಿ ತೊಡೆದು ಹಾಕುವ ನಿಟ್ಟಿನಲ್ಲಿ ತನ್ನ ವ್ಯಾಪ್ತಿಯೊಳಗಡೆ ವಾಸ್ತವ್ಯ ಹೊಂದಿರುವ ಶೌಚಾಲಯ ರಹಿತ ಕುಟುಂಬದ ಮನೆಗಳಲ್ಲಿ ಶೌಚಾಲಯಗಳ ನಿರ್ಮಾಣಕ್ಕಾಗಿ ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮದಡಿಯಲ್ಲಿ ಅರ್ಜಿಗಳನ್ನು ಆಹ್ವಾನಿಸಿದೆ.

ಆ ನಿಟ್ಟಿನಲ್ಲಿ ಉಡುಪಿ ನಗರಸಭೆಯು ಕೈಗೊಳ್ಳುವ ಕ್ರಮಗಳು ಇಂತಿವೆ,  ವಾರ್ಡ್‍ಗಳಲ್ಲಿರುವ ಮನೆಗಳ ಸಂಖ್ಯಾಗಳನ್ನಾಧರಿಸಿ ಮತ್ತು ಅಗತ್ಯಕ್ಕೆ ತಕ್ಕಂತೆ ವಾರ್ಡ್ ಅಧಿಕಾರಿಗಳನ್ನು ಮತ್ತು ಸ್ವಚ್ಛ ಭಾರತ್ ಮಿಷನ್ ಸಹಾಯಕರು/ ಸ್ವಚ್ಛತಾ ಧೂತ್ ರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ. ಸ್ವಚ್ಛತಾ ಧೂತ್ ನವರು ಮನೆ-ಮನೆ ಭೇಟಿ ನಡೆಸಿ ನಿಗದಿತ ನಮೂನೆಯಲ್ಲಿ ಸಮೀಕ್ಷೆಯನ್ನು ಕೈಗೊಳ್ಳುತ್ತಾರೆ. ಪ್ರತಿ ವಾರ ವಾರ್ಡ್ ಅಧಿಕಾರಿಗಳು ಸಮೀಕ್ಷೆ ನಡೆಸಿರುವ ವರದಿಗಳನ್ನು ಸಂಗ್ರಹಿಸಿ ಸ್ವಚ್ಛ ಭಾರತ್ ಮಿಷನ್ ವೆಬ್ ನಲ್ಲಿ ದಾಖಲೀಕರಣ ಕೈಗೊಳ್ಳುತ್ತಾರೆ. ಸ್ವಚ್ಛ ಭಾರತ್ ಮಿಷನ್ ಸಮಿತಿಯನ್ನು ಆಯುಕ್ತರ ನೇತೃತ್ವದಲ್ಲಿ ರಚಿಸಲಾಗಿದೆ. ಪರಿಸರ ಅಭಿಯಂತರರನ್ನು ಸ್ವಚ್ಛ ಭಾರತ್ ಮಿಷನ್ ಅನುಷ್ಠಾನಕ್ಕಾಗಿ ನೋಡಲ್ ಅಧಿಕಾರಿಗಳನ್ನಾಗಿ ಹಾಗೂ ಸಮುದಾಯ ಸಂಘಟಣಾಧಿಕಾರಿ, ಸಹಾಯಕ ಅಭಿಯಂತರರು, ಕಿರಿಯ ಅಭಿಯಂತರರು, ಕಂದಾಯ ಅಧಿಕಾರಿಯವರನ್ನು ಸಂಚಾಲಕರನ್ನಾಗಿ ನೇಮಿಸಲಾಗಿದೆ.

ಉಡುಪಿ ನಗರಸಭೆಯ ಕಚೇರಿಯಲ್ಲಿ ಹೆಲ್ಪ್ ಡೆಸ್ಕ್ ನ್ನು ರಚಿಸಲಾಗಿದೆ. ಸದರಿ ಹೆಲ್ಪ್ ಡೆಸ್ಕ್ ನ ಮೂಲಕ ನಿಗದಿತ ನಮೂನೆಯಲ್ಲಿ ವೈಯಕ್ತಿಕ ಶೌಚಾಲಯಗಳ ಫಲಾನುಭವಿಗಳಿಂದ ಅರ್ಜಿಯನ್ನು ಸ್ವೀಕರಿಸಲಾಗುವುದು. ಸ್ವೀಕೃತಗೊಂಡಿರುವ ಅರ್ಜಿಗಳ ಪರಿಶೀಲನೆ ಮತ್ತು ಅರ್ಜಿಗಳನ್ನು ಸ್ವಚ್ಛ ಭಾರತ್ ಮಿಷನ್ ವೆಬ್ಸೈಟ್ ಮೂಲಕ ಭರ್ತಿ ಮಾಡಲಾಗುವುದು. ಅರ್ಜಿಗಳನ್ನು ಸ್ವೀಕರಿಸಿದ ಬಗ್ಗೆ ದೃಢೀಕರಣ ರಶೀದಿಯನ್ನು ಫಲಾನುಭವಿಗಳಿಗೆ ನೀಡಲಾಗುವುದು. ಅರ್ಹವಾಗಿರುವ ಫಲಾನುಭವಿಗಳಿಗೆ ಸಮ್ಮತಿ ಪತ್ರ ನೀಡಲಾಗುವುದು.

ಸ್ವಚ್ಛ ಭಾರತ್ ಮಿಷನ್ ನೋಡಲ್ ಅಧಿಕಾರಿ, ವಾರ್ಡ್ ಮಟ್ಟದ ಅಧಿಕಾರಿ, ಸ್ವಚ್ಛತಾ ಧೂತ್ ಮುಂತಾದವರ ಹೆಸರು, ಮೊಬೈಲ್ ಸಂಖ್ಯೆಗಳನ್ನು  ಉಡುಪಿ ನಗರಸಭೆಯ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು. ಶೌಚಾಲಯ ನಿರ್ಮಾಣ ಕೈಗೊಳ್ಳುವ ಫಲಾನುಭವಿಗಳ ಮೊದಲನೆಯ ಕಂತಿನ ಪ್ರೋತ್ಸಾಹಧನವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಬಿಡುಗಡೆ ಮಾಡಲಾಗುವುದು. ಸಮೀಕ್ಷೆ ಸಮಯದಲ್ಲಿ ಸಮುದಾಯ ಶೌಚಾಲಯ ಹಾಗೂ ಸಾರ್ವಜನಿಕ  ಶೌಚಾಲಯಗಳಿಗೆ ಅಗತ್ಯ ಸ್ಥಳಗಳನ್ನು ಗುರುತಿಸಲಾಗುವುದು.

ಅರ್ಜಿದಾರರು ಒದಗಿಸಬೇಕಾದ ದಾಖಲೆಗಳು ನಿಗದಿತ ನಮೂನೆಯಲ್ಲಿ ಅರ್ಜಿ, ಇತ್ತೀಚಿನ 2 ಭಾವಚಿತ್ರ, ಪಡಿತರ ಚೀಟಿ-ಬಿ.ಪಿ.ಎಲ್ ಅಥವಾ ಎ.ಪಿ.ಎಲ್ ಕಾರ್ಡ್,  ಆಧಾರ ಕಾರ್ಡ್ನ ಪ್ರತಿ, ಮತದಾರರ ಗುರುತು ಚೀಟಿಯ ಪ್ರತಿ, ವಿದ್ಯುತ್ ಬಿಲ್ ನ ಪ್ರತಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ನ ಉಳಿತಾಯ ಖಾತೆಯ (ವಿಳಾಸ ಹೊಂದಿರುವ ಪುಟದ) ಪ್ರತಿ -ಪ್ರಧಾನಮಂತ್ರ ಜನ್ ಧನ್ ಖಾತೆಗೆ ಆದ್ಯತೆ ಇರುತ್ತದೆ.

ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಉಡುಪಿ ನಗರಸಭೆಯ ವ್ಯಾಪ್ತಿಯಲ್ಲಿ ಶೌಚಾಲಯ ರಹಿತ ಮನೆಗಳನ್ನು ಗುರುತಿಸಲು ಸ್ವಚ್ಛತಾ ಧೂತ್ ರ ಮೂಲಕ ಮೇ 8 ರಂದು ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಸಾರ್ವಜನಿಕರು/ ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಸಹಕರಿಸಲು ಕೋರಿದೆ. ಅಲ್ಲದೆ, ಇಂದಿನಿಂದಲೇ ಶೌಚಾಲಯ ರಹಿತರು ಶೌಚಾಲಯ ನಿರ್ಮಾಣಕ್ಕಾಗಿ ಉಡುಪಿ ನಗರಸಭೆಗೆ ಅರ್ಜಿಗಳನ್ನು ಸಲ್ಲಿಸುವಂತೆ ಉಡುಪಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 

 


Spread the love