ಉಡುಪಿ : ನಿರಾಶ್ರಿತರು, ನಿರ್ಗತಿಕರಿಗೆ ಕೆ.ಎಂ.ಎಫ್ ವತಿಯಿಂದ 5000 ಲೀ ಉಚಿತ ಹಾಲು ವಿತರಣೆ

Spread the love

ಉಡುಪಿ : ನಿರಾಶ್ರಿತರು, ನಿರ್ಗತಿಕರಿಗೆ ಕೆ.ಎಂ.ಎಫ್ ವತಿಯಿಂದ 5000 ಲೀ ಉಚಿತ ಹಾಲು ವಿತರಣೆ

ಉಡುಪಿ : ಕೊರೋನಾ ನಿಯಂತ್ರಣ ಕ್ರಮಗಳಿಂದ ತೊಂದರೆಗೊಳಗಾದ ಉಡುಪಿ ಜಿಲ್ಲೆಯಲ್ಲಿನ ನಿರಾಶ್ರಿತರು, ನಿರ್ಗತಿಕರು , ಕೂಲಿ ಕಾರ್ಮಿಕರು, ಮತ್ತು ಬಡ ಜನತೆಗೆ ಕೆ.ಎಂ.ಎಫ್ ವತಿಯಿಂದ ಪ್ರತಿನಿತ್ಯ 5000 ಲೀ ಹಾಲು ನ್ನು ಏಪ್ರಿಲ್ 3 ರಿಂದ 14 ರ ವರೆಗೆ ಉಚಿತವಾಗಿ ವಿತರಿಸುವ ಕಾರ್ಯಕ್ರಮಕ್ಕೆ , ಶುಕ್ರವಾರ ಉಡುಪಿ ನಗರಸಭೆ ಆವರಣದಲ್ಲಿ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ, ದ.ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹಗ್ಡೆ , ರಾಜ್ಯ ಸರ್ಕಾರದ ಸೂಚನೆಯಂತೆ , ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ , ನಿರಾಶ್ರಿತರು, ಕೂಲಿ ಕಾರ್ಮಿಕರು ಮತ್ತು ಬಡವರಿಗಾಗಿ ಏಪ್ರಿಲ್ 3 ರಿಂದ 14 ರ ವರೆಗೆ ಪ್ರತಿನಿತ್ಯ 5000 ಲೀ ಹಾಲನ್ನು ಉಚಿತವಾಗಿ ವಿತರಿಸಲಿದ್ದು, ಇದರಿಂದ ಲಾಕ್ಡೌನ್ ನಿಂದ ಹೆಚ್ಚುವರಿಯಾಗಿ ಸಂಗ್ರಹವಾಗುತ್ತಿರುವ ಹಾಲನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಲು ಮತ್ತು ರೈತರಿಂದ ನಿರಂತರವಾಗಿ ಹಾಲು ಖರೀದಿ ಮಾಡುವ ಮೂಲಕ ರೈತರ ಬೆಂಬಲಕ್ಕೆ ನಿಲ್ಲಲು ಸಾಧ್ಯವಾಗಲಿದೆ, ಈಗಾಗಲೇ ಜಿಲ್ಲಾಡಳಿತ ಗುರುತಿಸಲಾಗಿರುವ ಪ್ರದೇಶಗಳಿಗೆ ಕೆಎಂಎಫ್ ವಾಹನ ತೆರಳಿ, ಅಲ್ಲಿ ಸಂಬಂದಪಟ್ಟ ಅಧಿಕಾರಿಗಳಿಗೆ ನಿಗಧಿತ ಪ್ರಮಾಣದ ಹಾಲಿನ ಪಾಕೆಟ್ ಗಳನ್ನು ನೀಡಲಿದ್ದು, ಅವರು ಸಂಬಂದಪಟ್ಟ ಫಲಾನುಭವಿಗಳಿಗೆ ತಲುಪಿಸಲಿದ್ದಾರೆ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮಾತನಾಡಿ, ಕೆಎಂಫ್ ನ ಈ ಉಚಿತ ಹಾಲು ವಿತರಣೆಯಿಂದ ನಿರಾಶ್ರಿತರಿಗೆ, ಬಡವರಿಗೆ ನೆರವಾಗುವ ಜೊತೆಗೆ ಜಿಲ್ಲೆಯ ರೈತರು ಹೈನುಗಾರಿಕೆಯನ್ನು ನಿತಂರತವಾಗಿ ನಡೆಸಲು ನೆರವಾಗಲಿದೆ, ಉಚಿತ ಹಾಲು ವಿತರಣೆಯನ್ನು ಸಮರ್ಪಕವಾಗಿ ನಿರ್ವಹಿಸಲು ಈಗಾಗಲೇ ಜಿಲ್ಲಾಡಳಿತ ಕ್ರಮಗಳನ್ನು ಕೈಗೊಂಡಿದ್ದು, ಈ ಬಗ್ಗೆ ಪ್ರತಿ ದಿನ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ನಂತರ ಉಡುಪಿಯ ಬೋರ್ಡ್ ಸ್ಕೂಲ್ನಲ್ಲಿದ್ದ ನಿರಾಶ್ರಿತರಿಗೆ ಉಚಿತ ಹಾಲು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆಯ ಪೌರಾಯುಕ್ತ ಆನಂದ್ ಕಲ್ಲೋಳಿಕರ್, ಕೆ.ಎಂ.ಎಫ್ ನ ಎಂ.ಡಿ. ಡಾ.ಜಿ.ವಿ ಹೆಗಡೆ, ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಡಾ.ರವಿರಾಜ್ ಮತ್ತಿತರರು ಉಪಸ್ಥಿತರಿದ್ದರು.


Spread the love