ಉಡುಪಿ ಪೊಲೀಸರ ಕಾರ್ಯಾಚರಣೆ: ಮನೆ ಕಳ್ಳತನ ಪ್ರಕರಣದ ಆರೋಪಿ ಬಂಧನ

Spread the love

ಉಡುಪಿ ಪೊಲೀಸರ ಕಾರ್ಯಾಚರಣೆ: ಮನೆ ಕಳ್ಳತನ ಪ್ರಕರಣದ ಆರೋಪಿ ಬಂಧನ

ಉಡುಪಿ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಉಡುಪಿ ನಗರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕುಕ್ಕೆಹಳ್ಳಿ ಗ್ರಾಮದ ಕುಕ್ಕಿಕಟ್ಟೆ ನಿವಾಸಿ ಸುಕೇಶ ನಾಯ್ಕ(37) ಬಂಧಿತ ಆರೋಪಿ. ಈತನಿಂದ ಕಳವು ಮಾಡಿದ 548.31 ಮಿಲಿ ಗ್ರಾಂ ತೂಕದ 65,79,720 ರೂ. ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಉಡುಪಿ ನಗರದ ಒಳಕಾಡು ನಿವಾಸಿ ಶೈಲಾ ವಿಲ್ಹೆಲ್ ಮೀನಾ ಎಂಬವರು ನ.30ರಂದು ಬೆಳಗ್ಗೆ ಚರ್ಚಿಗೆ ಹೋಗಲು ಚಿನ್ನಾಭರಣ ಇಟ್ಟಿದ್ದ ಬೆಡ್‌ರೂಂನ ಕಪಾಟು ತೆರೆದಿದ್ದು, ಆಗ ಅದರಲ್ಲಿಟ್ಟಿದ್ದ ಸುಮಾರು 548.31 ಗ್ರಾಂ ಚಿನ್ನಾಭರಣ ಹಾಗೂ ಮೊಬೈಲ್ ಫೋನ್‌ನ್ನು ಕಳವಾಗಿರುವುದು ಕಂಡು ಬಂತು. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಸಂಬಂಧ ಉಡುಪಿ ಡಿವೈಎಸ್ಪಿ ಡಿ.ಟಿ.ಪ್ರಭು ಮಾರ್ಗದರ್ಶನದಲ್ಲಿ ಉಡುಪಿ ನಗರ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ಮಹೇಶ ಪ್ರಸಾದ್ ಪಿ. ನೇತೃತ್ವದಲ್ಲಿ ಠಾಣೆಯ ಎಸ್ಸೈ ಭರತೇಶ ಕಂಕಣವಾಡಿ ಹಾಗೂ ಸಿಬ್ಬಂದಿಗಳಾದ ಪ್ರಸನ್ನ ಸಿ., ಜೀವನ್ ಕುಮಾರ್, ಸಂತೋಷ್ ಶೆಟ್ಟಿ, ಬಶೀರ್, ಸುರೇಂದ್ರ ಡಿ., ಆನಂದ ಎಸ್., ಸಂತೋಷ್ ರಾಥೋಡ್, ಸಂತೋಷ್ ಗುಲ್ವಾಡಿ ಅವರನ್ನೊಳಗೊಂಡ ತಂಡವನ್ನು ರಚಿಸಿದ್ದು, ತನಿಖೆ ನಡೆಸಿದ ತಂಡ ಆರೋಪಿಯನ್ನು ಡಿ.2ರಂದು ಉಡುಪಿ ನಗರದ ಕಿನಿಮೂಲ್ಕಿ ಹಿರೇನ್ ಬಾರ್ ಬಳಿ ಬಂಧಿಸಿತು.

ಬಳಿಕ ವಿಚಾರಣೆಗೆ ಒಳಪಡಿಸಿದಾಗ ಆತ ಕಳವು ಮಾಡಿದ ಸೊತ್ತುಗಳನ್ನು ಅಜ್ಜರಕಾಡು ಮನೆಯೊಂದರಲ್ಲಿ ಇರಿಸಿರುವುದಾಗಿ ತಿಳಿಸಿದ್ದು, ಅದರಂತೆ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿ ವಿರುದ್ದ ಈಗಾಗಲೇ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 11 ಮನೆಕಳ್ಳತನ ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ ಉಡುಪಿ ನಗರ ಠಾಣೆಯಲ್ಲಿ 5 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 4 ಪ್ರಕರಣಗಳಲ್ಲಿ ಆರೋಪಿಗೆ ಶಿಕ್ಷೆಯಾಗಿದೆ. ಅದೇ ರೀತಿ ಹಿರಿಯಡ್ಕ ಠಾಣೆಯಲ್ಲಿ 3 ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 1 ಪ್ರಕರಣದಲ್ಲಿ ಶಿಕ್ಷೆಯಾಗಿದೆ. ಬ್ರಹ್ಮಾವರ ಠಾಣೆಯಲ್ಲಿ 2 ಪ್ರಕರಣ ಹಾಗೂ ಮಣಿಪಾಲ ಠಾಣೆಯಲ್ಲಿ 1 ಪ್ರಕರಣಗಳು ನ್ಯಾಯಲಯದ ವಿಚಾರಣೆಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments