ಉದ್ಯಾವರ – ಪಿತ್ರೋಡಿಯಲ್ಲಿ ಗ್ರಾಮೀಣ ಕ್ರೀಡೆಗಳ ಸಮ್ಮೀಲನ “ಬಲೇ ಕೆಸರ್ಡ್ ಗೊಬ್ಬುಗ”

Spread the love

ಉದ್ಯಾವರ – ಪಿತ್ರೋಡಿಯಲ್ಲಿ ಗ್ರಾಮೀಣ ಕ್ರೀಡೆಗಳ ಸಮ್ಮೀಲನ “ಬಲೇ ಕೆಸರ್ಡ್ ಗೊಬ್ಬುಗ”

ಉಡುಪಿ: ಉದ್ಯಾವರ ಪಿತ್ರೋಡಿ ಕೆಸರುಗದ್ದೆಯಲ್ಲಿ ನಮನ ವೆಂಕಟರಮಣ ಪಿತ್ರೋಡಿ ಮತ್ತು ಜಿಲ್ಲಾ ಪಂಚಾಯತ್ ಇವರುಗಳ ಜಂಟಿ ಆಶ್ರಯದಲ್ಲಿ “ಬಲೇ ಕೆಸರ್ಡ್ ಗೊಬ್ಬುಗ” ರವಿವಾರ ಗ್ರಾಮೀಣ ಕ್ರೀಡಾಕೂಟ ನಡೆಯಿತು. ಕೆಸರುಗದ್ದೆಯಲ್ಲಿ ಮಕ್ಕಳು, ಮಹಿಳೆಯರು ಹಿರಿಯರೆನ್ನದೆ ಎಲ್ಲರೂ ಆಟವಾಡಿ ಅಪರೂಪದ ಖುಷಿ ಅನುಭವಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಮಾತನಾಡಿ ಕೃಷಿ ಸಂಸ್ಕತಿಯ ಜಾಗೃತಿ ಮೂಡಿಸುವಲ್ಲಿ ಕೆಸರು ಗದ್ದೆಯಲ್ಲಿ ನಡೆಯುವ ಗ್ರಾಮೀಣ ಕ್ರೀಡಾಕೂಟ ಸಹಕಾರಿಯಾಗಿದೆ. ಅದರೊಂದಿಗೆ ಇಲ್ಲಿ ಕೃಷಿಕರನ್ನು ಗುರುತಿಸಿ ಸಮ್ಮಾನಿಸುವುದು ಪ್ರಶಂಸನೀಯ.

ಮುಖ್ಯ ಅತಿಥಿಯಾಗಿ ಮಾತನಾಡಿದ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ನಮ್ಮ ಪೂರ್ವ ಸಂಸ್ಕೃತಿಯನ್ನು ಯುವ ಪೀಳಿಗೆಗೆ ವರ್ಗಾಯಿಸುವ ಕೆಲಸ ಈ ಕ್ರೀಡಾಕೂಟದಿಂದಾಗುತ್ತದೆ. ಭದ್ರ ಭವಿಷ್ಯದ ದೃಷ್ಟಿಯಿಂದ ಕೃಷಿಯನ್ನು ಪರಿಚಯಿಸುವ ಮತ್ತುಷ್ಟು ಚಟುವಟಿಕೆ ಆಗಬೇಕೆಂದರು.

ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಗಂಧಿ ಶೇಖರ್ ನಮನ ವೆಂಕಟರಮಣದ ಅಧ್ಯಕ್ಷ ಗಿರೀಶ್ ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ವೆಂಕಟರಮಣ ಭಜನ ಮಂದಿರದಿಂದ ಅತಿಥಿಗಳನ್ನು ಮೆರವಣಿಗೆಯಲ್ಲಿ ಕ್ರೀಡಾ ಗದ್ದೆಗೆ ಕರೆತರಲಾಯಿತು. ಕೃಷಿ ಕ್ಷೇತ್ರದ ಸಾಧಕರಾದ ಲಾರೆನ್ಸ್ ಡೆಸಾ, ಭಾಸ್ಕರ ಪೂಜಾರಿ, ಸುಧರ್ಮ ಕೋಟ್ಯಾನ್, ಸ್ಥಳೀಯ ಸಾಧಕ ಸದಾಶಿವ ಪಿತ್ರೋಡಿ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ತಾಪಂ ರಜನಿ ಆರ್ ಅಂಚನ್, ಗ್ರಾಪಂ ಸದಸ್ಯ ಜಿತೇಂದ್ರ ಶೆಟ್ಟಿ, ವಿಹಿಂಪ ನಗರಾಧ್ಯಕ್ಷ ಸಂತೋಷ್ ಸುವರ್ಣ ಬೊಳ್ಜೆ, 4 ಗಿನ್ನೆಸ್ ದಾಖಲೆಯ ಸಾಧಕಿ ತನುಶ್ರೀ ಪಿತ್ರೋಡಿ, ವೆಂಕಟರಮಣ ಮಹಿಳಾ ಮಂಡಳಿ ಅಧ್ಯಕ್ಷೆ ವಿಜಯಲಕ್ಷ್ಮೀ ನಾಗೇಶ್ ಉಪಸ್ಥಿತರಿದ್ದರು. ಅಧ್ಯಕ್ಷ ಗಿರೀಶ್ ಸುವರ್ಣ ಸ್ವಾಗತಿಸಿದರು, ವಿನಯ್ ಕುಮಾರ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


Spread the love