ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರ್ಲಕ್ಷ್ಯ: ಜಿ.ಪಂ. ಅಧ್ಯಕ್ಷರ ಅಸಮಾಧಾನ

Spread the love

ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರ್ಲಕ್ಷ್ಯ: ಜಿ.ಪಂ. ಅಧ್ಯಕ್ಷರ ಅಸಮಾಧಾನ 

ಮ0ಗಳೂರು:  ಜಿಲ್ಲೆಯಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಮಗಾರಿಗಳ ಅನುಷ್ಠಾನದಲ್ಲಿ ಸಂಬಂಧಪಟ್ಟ ಇಲಾಖೆಗಳು ಹಾಗೂ ಗ್ರಾಮ ಪಂಚಾಯತ್‍ಗಳು ನಿರ್ಲಕ್ಷ್ಯ ವಹಿಸುವ ಪ್ರವೃತ್ತಿ ಕಂಡುಬರುತ್ತಿದೆ. ಇದರಿಂದ ಸಾರ್ವಜನಿಕ ಫಲಾನುಭವಿಗಳ ವಿವಿಧ ಯೋಜನೆಗಳು ಹಿಂದೆ ಬೀಳುವಂತಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ZP KDP

ಅವರು ಸೋಮವಾರ ಜಿ.ಪಂ. ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದರು. ಪ್ರತೀ ಗ್ರಾಮ ಪಂಚಾಯತ್‍ನಲ್ಲಿ ಕನಿಷ್ಠ 50 ವೈಯಕ್ತಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಈಗಾಗಲೇ ಎಲ್ಲಾ ಗ್ರಾ.ಪಂ.ಗಳಿಗೆ ಸೂಚಿಸಲಾಗಿದೆ. ಅನೇಕ ಜನೋಪಯೋಗಿ ಕೆಲಸಗಳನ್ನು ಉದ್ಯೋಗಖಾತ್ರಿ ಯೋಜನೆಯಡಿ ಕೈಗೊಳ್ಳಲು ಅವಕಾಶವಿದ್ದರೂ, ಗ್ರಾ.ಪಂ.ಗಳ ನಿರ್ಲಕ್ಷ್ಯದಿಂದ ಯೋಜನೆಯಲ್ಲಿ ಜಿಲ್ಲೆ ಹಿಂದೆ ಬೀಳುವಂತಾಗಿದೆ. ಈ ನಿಟ್ಟಿನಲ್ಲಿ ಯೋಜನೆಯಡಿ ಕೈಗೆತ್ತಿಕೊಳ್ಳಲಾದ ಎಲ್ಲಾ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ವಸತಿ ಯೋಜನೆಯ ಫಲಾನುಭವಿಗಳಿಗೆ ನರೇಗಾ ಯೋಜನೆಯಲ್ಲಿ ಪ್ರತೀ ಮನೆಗೂ 90 ಮಾನವ ದಿನಗಳನ್ನು ನೀಡಲು ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಸಭೆಯಲ್ಲಿ ಮಾತನಾಡಿ, ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗಳು ಹಲವೆಡೆ ವಿಳಂಭಗತಿಯಲ್ಲಿ ನಡೆಯುತ್ತಿದೆ. ಕಿನ್ನಿಗೋಳಿ ಸಮೀಪ ಪಂಜ ಅಂಗನವಾಡಿ ಕಾಮಗಾರಿ ಎರಡು ವರ್ಷದಿಂದಲೂ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದರು. ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಾಗ ರಸ್ತೆಯ ಪಕ್ಕದಲ್ಲಿ ಚರಂಡಿ ವ್ಯವಸ್ಥೆಯನ್ನೂ ಯೋಜನೆಯಲ್ಲಿ ಸೇರಿಸಬೇಕು ಎಂದು ಉಪಾಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ, ಪ್ರತೀ ಗ್ರಾ.ಪಂ.ಗಳಲ್ಲಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ನರ್ಸರಿ ಸ್ಥಾಪನೆಗೆ ಜಾಗ ಗುರುತಿಸಲು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು. ಸರಕಾರಿ ಶಾಲೆಗಳಲ್ಲಿ ಅಂಗನವಾಡಿ ತೆರೆಯಲು ಸೂಕ್ತ ಸ್ಥಳಾವಕಾಶವನ್ನು ಆದ್ಯತೆಯಲ್ಲಿ ನೀಡಬೇಕು. ಅಂಗನವಾಡಿಗಳ ಸುತ್ತಮುತ್ತ ತೋಟಗಾರಇಕಾ ಗಿಡಗಳನ್ನು ಬೆಳೆಸಬೇಕು. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಹಳೆಯ ಎಲ್ಲಾ ಕಾಮಗಾರಿಗಳನ್ನು ಇನನೆರಡು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದರು.

ಜಿಲ್ಲೆಯ ಹಲವು ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಥಳಾವಕಾಶದ ಕೊರತೆ ಕಂಡುಬಂದಿದೆ. ನಬಾರ್ಡ್ ಯೋಜನೆಯಲ್ಲಿ ಜಿಲ್ಲೆಯಲ್ಲಿ 10 ಪದವಿಪೂರ್ವ ಕಾಲೇಜುಗಳ ಕಟ್ಟಡ ಮಂಜೂರಾಗಿದೆ. ಆದರೆ, ಯೋಜನೆಯ ಉಸ್ತುವಾರಿ ವಹಿಸಿರುವ ಕೆಆರ್‍ಐಡಿಎಲ್ ಸಂಸ್ಥೆಯು ಇನ್ನೂ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಈ ವಾರದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳದಿದ್ದರೆ, ಕೆಆರ್‍ಐಡಿಎಲ್ ಅಧಿಕಾರಿ ವಿರುದ್ಧ ಸೂಕ್ತ ಕ್ರಮಕ್ಕೆ ಶೀಫಾರಸು ಮಾಡುವುದಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಎಚ್ಚರಿಸಿದರು. ಎಚ್‍ಐವಿ ಕಾರ್ಯಕ್ರಮದಡಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳ ವೇತನ ಪಾವತಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಅವರು ಸೂಚಿಸಿದರು.

ಪಡಿತರ ಆಹಾರ ನ್ಯಾಯಬೆಲೆ ಅಂಗಡಿಗಳು ಬೆಳಿಗ್ಗೆ 8ರಿಂದ 12 ಹಾಗೂ ಸಂಜೆ 4ರಿಂದ 8ಗಂಟೆಯವರೆಗೆ ತೆರೆದಿಡಬೇಕು. ಈ ಸಮಯ ಹಾಗೂ ದರಗಳನ್ನು ಅಂಗಡಿ ಮುಂದೆ ಪ್ರದರ್ಶಿಸಲು ಕ್ರಮಕೈಗೊಳ್ಳಲು ಸಿಇಓ ಅವರು ಆಹಾರ ಇಲಾಖೆಗೆ ಸೂಚಿಸಿದರು.

ಜಿಲ್ಲೆಯಲ್ಲಿ 297 ಡೆಂಗ್ಯು ಪ್ರಕರಣಗಳು ದೃಢಪಟ್ಟಿದೆ. ಇದುವರೆಗೆ 11 ಮಂದಿ ಸಾವನ್ನಪ್ಪಿದ್ದಾರೆ. ಡೆಂಗ್ಯು ರೋಗದ ಬ್ಗಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ತೀವ್ರ ಪ್ರಯತ್ನ ಪಡುತ್ತಿದೆ. ಡೆಂಗ್ಯು ಸೊಳ್ಳೆಗಳು ಹಗಲು ಹೊತ್ತಿನಲ್ಲಿಯೇ ಮಾನವರನ್ನು ಕಚ್ಚುವುದರಿಂದ ಸಾರ್ವಜನಿಕರೂ, ಈ ನಿಟ್ಟಿನಲ್ಲಿ ಸೂಕ್ತ ಮುಂಜಾಗರೂಕತೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಡೆಂಗ್ಯು, ಮಲೇರಿಯಾ ಕುರಿತು ಮನೆ-ಮನೆಗೆ ತೆರಳಿ ಮಾಹಿತಿ ಪಡೆಯುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಪ್ರಸ್ತುತ ಪ್ರತೀ ಮನೆಯ ಭೇಟಿಗೆ ಒಂದು ರೂಪಾಯಿ ನೀಡಲಾಗುತ್ತಿದೆ. ಇದು ಅತಿ ಕಡಿಮೆ ಮೊತ್ತವಾಗಿದ್ದು, ಇದನ್ನು ಹೆಚ್ಚಿಸಲು ಸರಕಾರಕ್ಕೆ ಶಿಫಾರಸು ಮಾಡಲು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಆರೋಗ್ಯ ಇಲಾಖೆಗೆ ಸೂಚಿಸಿದರು.

ಸಭೆಯಲ್ಲಿ ಜಿ.ಪಂ. ಉಪಕಾರ್ಯದರ್ಶಿ ಎನ್.ಆರ್. ಉಮೇಶ್, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love