ಉಪ್ಪಿನಂಗಡಿ: ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಶೇಷಗಿರಿ ಭಟ್ ನ ಬಂಧನ, ಬಿಡುಗಡೆ

Spread the love

ಉಪ್ಪಿನಂಗಡಿ: ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಶೇಷಗಿರಿ ಭಟ್ ನ ಬಂಧನ, ಬಿಡುಗಡೆ

ಉಪ್ಪಿನಂಗಡಿ: ಜಾತಕ ತೋರಿಸಲು ಬಂದ ಯುವತಿಯೋರ್ವಳ ಹಿಂದೆ ಬಿದ್ದ ಜ್ಯೋತಿಷಿಯೊಬ್ಬ ಮದುವೆಯಾಗುವಂತೆ ನಿರಂತರ ಕಿರುಕುಳ ನೀಡಿದ ಘಟನೆ ಬೆಳ್ತಂಗಡಿ ತಾಲೂಕಿನ ತೆಕ್ಕಾರಿನಲ್ಲಿ ನಡೆದಿದೆ.

ಮೂಲತಃ ಶಿರಸಿ ಮೂಲದವನಾದ, ಸ್ಥಳೀಯ ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡಿದ್ದ ಶೇಷಗಿರಿ ಭಟ್ ಆರೋಪಿ ಜ್ಯೋತಿಷಿ. ಸಂತ್ರಸ್ತ ಯುವತಿಯ ಮನೆಯವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಈತನನ್ನು ಬಂಧಿಸಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ.

ತೆಕ್ಕಾರಿನ ಯುವತಿಯೊಬ್ಬಳ ಜಾತಕ ಪರಿಶೀಲಿಸಲು ಆಕೆಯ ಮನೆಯವರು ಶೇಷಗಿರಿ ಭಟ್ ಬಳಿಗೆ ಕರೆದುಕೊಂಡು ಹೋಗಿದ್ದರು. ಈ ವಿಚಾರವಾಗಿ ಬಳಿಕ ಯುವತಿಯ ಮನೆಯವರನ್ನು ಸಂಪರ್ಕಸಿದ ಶೇಷಗಿರಿ ಭಟ್, ಆಕೆಯ ದೋಷ ಪರಿಹಾರಕ್ಕಾಗಿ ಕೆಲವೊಂದು ಪೂಜೆ ಮಾಡಬೇಕಿದೆ ಎಂದು ಹೇಳಿದ್ದ. ಇದಾದ ಬಳಿ ಆತ ಯುವತಿಯನ್ನು ತನಗೆ ಮದುವೆ ಮಾಡಿಕೊಡುವಂತೆ ಮನೆಯವರಲ್ಲಿ ಒತ್ತಾಯಿಸಿದ್ದ. ಆದರೆ ಮನೆಯವರು ಹಾಗೂ ಯುವತಿ ಇದನ್ನು ನಿರಾಕರಿಸಿದ್ದಾರೆನ್ನಲಾಗಿದೆ.

ಆದರೂ ಬೆನ್ನು ಬಿಡದ ಆರೋಪಿ ಶೇಷಗಿರಿ ಭಟ್ ಯುವತಿಗೆ ನಾನಾ ಕಿರುಕುಳ ನೀಡಲು ಶುರುವಿಟ್ಟುಕೊಂಡಿದ್ದನ್ನಲ್ಲದೆ, ಮನೆಯ ಕೊಟ್ಟಿಗೆಗೆ ಬೆಂಕಿ ಹಚ್ಚಿಯೂ ಹೋಗಿದ್ದ ಎಂದು ಸಂತ್ರಸ್ತೆಯ ಮನೆಯವರು ಆರೋಪಿಸಿದ್ದಾರೆ.

ಈ ಸಂಬಂಧ ಯುವತಿ ಮನೆಯವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದರು.

ಆದರೂ ಚಾಳಿ ಬಿಡದ ಆರೋಪಿ, ಮಧ್ಯರಾತ್ರಿಯ ತಮ್ಮ ಮನೆಗೆ ಆಗಮಿಸಿ ಯಾರ ಅರಿವಿಗೂ ಬಾರದಂತೆ ಮಾಟ ಮಂತ್ರಗಳ ಪ್ರಯೋಗ ಮಾಡಿದ್ದಾನೆ. ಈ ದೃಶ್ಯ ಮನೆಯಲ್ಲಿರುವ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಆರೋಪಿ ಶೇಷಗಿರಿ ಭಟ್ ನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ಈತ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ ಎಂದು ತಿಳಿದುಬಂದಿದೆ.


Spread the love
Subscribe
Notify of

0 Comments
Inline Feedbacks
View all comments