ಉಳ್ಳಾಲದಲ್ಲಿ ಎಂಡಿಎಮ್‌ಎ ಮಾದಕವಸ್ತು ಸಾಗಾಟ: ಯುವಕನ ಬಂಧನ
ಉಳ್ಳಾಲ: ಸಾರ್ವಜನಿಕ ಸ್ಥಳದಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಆರೋಪದಡಿ ಉಳ್ಳಾಲ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡವು ಯುವಕನೊಬ್ಬನನ್ನು ಬಂಧಿಸಿ ನಿಷೇಧಿತ ಮಾದಕವಸ್ತು ವಶಪಡಿಸಿಕೊಂಡಿರುವ ಘಟನೆ ಜನವರಿ 16, 2026ರಂದು ನಡೆದಿದೆ.
ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ, ಉಳ್ಳಾಲ ತಾಲೂಕು ಮುನ್ನೂರು ಗ್ರಾಮದ ರಾಣಿಪುರ ಮೈದಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರ–ಸಜಿಪ–ಮುನ್ನೂರು ನಿವಾಸಿ ಇಮ್ಮಿಯಾಜ್ @ ಮೊಹಮ್ಮದ್ ಇಮ್ಮಿಯಾಜ್ ಎಂಬಾತನು ಎಂಡಿಎಮ್‌ಎ ಮಾದಕವಸ್ತುವನ್ನು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ತನ್ನ ಗಿರಾಕಿಗಳಿಗೆ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದನು. ಈ ಮಾಹಿತಿ ಆಧರಿಸಿ ಪಂಚರ ಸಮ್ಮುಖದಲ್ಲಿ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ದಾಳಿಯ ವೇಳೆ ಆರೋಪಿಯಿಂದ ಸುಮಾರು ರೂ.65,000 ಮೌಲ್ಯದ 13 ಗ್ರಾಂ ತೂಕದ ಎಂಡಿಎಮ್‌ಎ ಮಾದಕವಸ್ತು, ರೂ.2,000 ನಗದು, ಒಂದು ವಿವೋ ಮೊಬೈಲ್ ಫೋನ್ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಎನ್‌ಡಿಪಿಎಸ್ ಕಾಯ್ದೆ–1985ರ ಸೆಕ್ಷನ್‌ಗಳು 8(c), 22(a), 22(b) ಹಾಗೂ 22(c) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಉಳ್ಳಾಲ ಪೊಲೀಸ್ ಠಾಣೆ ತಿಳಿಸಿದೆ.













