ಉಳ್ಳಾಲ: ಮೀನು ಆಹಾರ ತಯಾರಿಕಾ ಘಟಕದ ಗೋಡೌನ್ ಗೆ ಬೆಂಕಿ
ಮಂಗಳೂರು: ಮೀನಿನ ಆಹಾರ ತಯಾರಿ ಮತ್ತು ಸಂಸ್ಕರಣಾ ಘಟಕದ ಗೋಡೌನ್ ಗೆ ಬೆಂಕಿ ಬಿದ್ದು ಅಪಾರ ನಷ್ಟ ಉಂಟಾದ ಘಟನೆ ಉಳ್ಳಾಲದ ಕೋಟೆಪುರದಲ್ಲಿ ಸಂಭವಿಸಿದೆ. ಈ ಪರಿಸರದಲ್ಲಿ ಹಲವು ಮೀನಿನ ಪ್ಯಾಕ್ಟರಿಗಳಿದ್ದರೂ ಯಾವುದೇ ರೀತಿಯ ಬೆಂಕಿ ಅವಘಡ ತಪ್ಪಿಸುವ ಸುರಕ್ಷತೆ ಇಲ್ಲ ಎಂದು ಹೇಳಲಾಗುತ್ತಿದೆ.
ಬೆಂಕಿ ಅವಘಢಕ್ಕೆ ಒಳಗಾದ ಎಂಎಪಿ ಫಿಶ್ ಫುಡ್ ಗೋದಾಮು ಖಾದರ್ ಎಂಬುವರಿಗೆ ಸೇರಿದ್ದು ಎಂದು ಹೇಳಲಾಗಿದ್ದು, ಸಂಜೆ ವೇಳೆ ಗೋದಾಮಿನ ಒಳಗೆ ಕಾಣಿಸಿಕೊಂಡ ಬೆಂಕಿ ಒಮ್ಮಿಂದೊಮ್ಮೆಲೇ ಸುತ್ತಲೂ ವ್ಯಾಪಿಸಿತು. ಬೆಂಕಿಯ ಕೆನ್ನಾಲೆ ಗೋದಾಮಿನ ಆಚೆಗೂ ಚಾಚಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ನೀರು ಎರಚಿ ಬೆಂಕಿ ನಂದಿಸಲು ಯತ್ನಿಸಿದರು. ತುಂಬಾ ಹೊತ್ತಿನ ನಂತರ ಮಂಗಳೂರಿನಿಂದ ಅಗ್ನಿಶಾಮಕ ದಳದ ವಾಹನ ಬಂದು ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಯಿತು.
ಇಲ್ಲಿನ 14 ಫಿಶ್ ಫುಡ್ ಮತ್ತು ಆಯಿಲ್ ಮಿಲ್ಗಳು ಪ್ರತಿವರ್ಷ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುತ್ತವೆ. ಅವುಗಳಲ್ಲಿ ಸುರಕ್ಷತಾ ಕ್ರಮಗಳನ್ನೇ ಅನುಸರಿಸುತ್ತಿಲ್ಲ. ದುರ್ಘಟನೆ ಸಂಭಂವಿಸಿದಾಗ ಆಂಬುಲೆನ್ಸ್ ಹಾಗೂ ಅಗ್ನಿಶಾಮಕ ವಾಹನ 15 ಕಿ.ಮೀ ದೂರದ ಮಂಗಳೂರಿನಿಂದ ಬರಬೇಕಾಗಿದೆ. ಸ್ವಲ್ಪ ಎಚ್ಚರಿಕೆ ತಪ್ಪಿದರೂ ಸ್ಥಳದಲ್ಲಿ ವಾಸಿಸುವ ಸಾವಿರಾರು ಮನೆಗೂ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಸ್ಥಳೀಯರು ಆರೋಪಿಸಿದ್ದಾರೆ.