ಉಸ್ತುವಾರಿ ಸಚಿವರು ಗಣರಾಜ್ಯೋತ್ಸವ ವೇದಿಕೆಯನ್ನು ಸುಳ್ಳು ಹರಡಲು ಬಳಸಿಕೊಂಡಿರುವುದು ಖೇದಕರ : ಸಂಸದ ಕ್ಯಾ. ಚೌಟ
ಮಂಗಳೂರು: ಸಂವಿಧಾನಿಕ ಹುದ್ದೆಯನ್ನು ದುರುಪಯೋಗಪಡಿಸಿ ಸುಳ್ಳಿನ ಕಾರ್ಖಾನೆಯನ್ನೇ ಸೃಷ್ಟಿಸುವ ಕಾಂಗ್ರೆಸ್ ಸರ್ಕಾರದ ಪ್ರಯತ್ನ ಸಂಪೂರ್ಣ ವಿಫಲಗೊಂಡಿರುವ ಕಾರಣ ಇದೀಗ ಸಚಿವ ದಿನೇಶ್ ಗುಂಡೂರಾವ್ ಅವರು ಘನವೆತ್ತ ರಾಜ್ಯಪಾಲರ ನಡೆಯನ್ನು ಟೀಕಿಸುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತಿರುಗೇಟು ನೀಡಿದ್ದಾರೆ.
ರಾಜ್ಯಪಾಲರು ಕೇಂದ್ರ ಸರ್ಕಾರದ ಕಪಿಮುಷ್ಟಿಯಲ್ಲಿದ್ದಾರೆ ಎನ್ನುವ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಕ್ಯಾ. ಚೌಟ ಅವರು, ಸಂವಿಧಾನ ಹಾಗೂ ಸಂವಿಧಾನಿಕ ಹುದ್ದೆಗಳಿಗೆ ಗೌರವ ಕೊಡದ ಕಾಂಗ್ರೆಸ್ ಸರ್ಕಾರದ ಸಚಿವರಿಂದ ಒಕ್ಕೂಟ ವ್ಯವಸ್ಥೆಯ ಬಗ್ಗೆ ಪಾಠ ಕಲಿಯಬೇಕಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯಪಾಲರು ಕೇಂದ್ರ ಸರ್ಕಾರದ ಹಿಡಿತದಲ್ಲಿದ್ದಾರೆ ಎಂದು ಹೇಳಿಕೆ ಕೊಡುವ ಮೊದಲು ಸದನದೊಳಗೆ ಅಧಿವೇಶನದ ವೇಳೆ ಘನವೆತ್ತ ರಾಜ್ಯಪಾಲರು ಬಂದಾಗ ಕಾಂಗ್ರೆಸ್ ನಾಯಕರ ವರ್ತನೆ ಹೇಗಿತ್ತು ಎಂಬುದರ ಬಗ್ಗೆ ಪರಾಮರ್ಶಿಸಲಿ. ಹಾಗಾದರೆ, ಸದನದೊಳಗೆ ಐವನ್ ಡಿಸೋಜ ಅವರು ಕಾಂಗ್ರೆಸ್ ಹೈಕಮಾಂಡ್ನ ಸೂಚನೆ ಮೇರೆಗೆ ರಾಜ್ಯಪಾಲರನ್ನು ಅಡ್ಡಗಟ್ಟಿ ಅಗೌರವಿಸುವ ಪ್ರಯತ್ನ ನಡೆಸಿದ್ದಾರೆಯೇ? ಹೀಗಿರುವಾಗ, ರಾಜ್ಯಪಾಲರ ನಡೆ ಟೀಕಿಸುವ ಉಸ್ತುವಾರಿ ಸಚಿವರು ಮೊದಲು ತಮ್ಮ ಕಾಂಗ್ರೆಸ್ ನಾಯಕರ ವರ್ತನೆ ಎಷ್ಟು ಸರಿಯೇ ಎಂಬುದನ್ನು ನಾಡಿನ ಜನತೆ ಮುಂದೆ ಸ್ಪಷ್ಟಪಡಿಸಲಿ ಎಂದು ಅವರು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರ ತನ್ನ ಸುಳ್ಳಿನ ಕಾರ್ಖಾನೆಯ ಪ್ರಚಾರಕ್ಕೆ ಸಂವಿಧಾನಾತ್ಮಕ ಹುದ್ದೆಯಲ್ಲಿರುವ ರಾಜ್ಯಪಾಲರನ್ನೂ ಬಳಸಿಕೊಳ್ಳಲು ಯತ್ನಿಸಿರುವುದು ದುರಾದೃಷ್ಟಕರ. ಕಾಂಗ್ರೆಸ್ನವರಿಗೆ ಸಂವಿಧಾನದ ಹುದ್ದೆಗಳು ಅಥವಾ ರಾಜ್ಯಪಾಲರ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ. ರಾಜ್ಯಪಾಲರು ಸುಳ್ಳಿನ ವಿರುದ್ಧ ನಿಂತರೆ ಅದನ್ನು ಸಹಿಸಲು ಸಚಿವ ದಿನೇಶ್ ಗುಂಡೂರಾವ್ ಅಂಥವರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಇನ್ನಾದರೂ ಅವರು ದಕ್ಷಿಣ ಕನ್ನಡಕ್ಕೆ ಬರುವಾಗ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕೆ ಘನತೆ ಬರುವ ರೀತಿ ಮಾತನಾಡುವುದನ್ನು ಕಲಿಯಲಿ ಎಂದು ಕ್ಯಾ. ಚೌಟ ಹೇಳಿದ್ದಾರೆ.
ಜಿಲ್ಲಾ ಗಣರಾಜ್ಯೋತ್ಸವದಲ್ಲಿ ಸಚಿವ ದಿನೇಶ್ ಗುಂಡೂರಾವ್ ಅವರು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಮಾತನಾಡುವುದನ್ನು ಬಿಟ್ಟು ಆ ವೇದಿಕೆಯನ್ನು ರಾಜಕೀಯ ಭಾಷಣಕ್ಕೆ ಸೀಮಿತಗೊಳಿಸಿರುವುದು ಖೇದಕರ. ಕೇಂದ್ರ ಸರ್ಕಾರವು ಉದ್ಯೋಗಖಾತ್ರಿ ಯೋಜನೆಯಲ್ಲಿ ಆಗುತ್ತಿದ್ದ ಸೋರಿಕೆ ತಡೆಗಟ್ಟುವುದಕ್ಕಾಗಿ ವಿಬಿ-ಜಿ ರಾಮ್ ಜಿ (VB-G RAM G) ಯೋಜನೆ ಜಾರಿಗೊಳಿಸಿದೆ. ಆದರೆ, ವಾಸ್ತವವನ್ನು ಒಪ್ಪಿಕೊಳ್ಳುವುದಕ್ಕೆ ಕಾಂಗ್ರೆಸಿಗರು ಸಿದ್ಧರಿಲ್ಲ. ಸುಳ್ಳಿನ ಸರಮಾಲೆ ಸೃಷ್ಟಿಸುವುದೇ ಕಾಂಗ್ರೆಸ್ ಸರ್ಕಾರದ ಕಾಯಕ ಹಾಗೂ ಅಜೆಂಡಾ ಆಗಿ ಬಿಟ್ಟಿದೆ. ಈ ಕಾರಣದಿಂದಲೇ ಸಚಿವ ದಿನೇಶ್ ಗುಂಡೂರಾವ್ ಅವರು ಗಣರಾಜ್ಯೋತ್ಸವ ವೇದಿಕೆಯನ್ನೇ ರಾಜಕೀಯವಾಗಿ ಬಳಸಿಕೊಂಡು ಗ್ರಾಮೀಣ ಭಾಗದ ಜನರ ಆರ್ಥಿಕತೆ ಬಲಪಡಿಸುವ ದೂರದೃಷ್ಟಿಯ ವಿಬಿ-ಜಿ ರಾಮ್ ಜಿ (VB-G RAM G) ಯೋಜನೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇದು ಕಾಂಗ್ರೆಸಿಗರ ಬೌದ್ಧಿಕ ದಿವಾಳಿತನ ಹಾಗೂ ಅಭಿವೃದ್ಧಿ ವಿಚಾರಗಳಿಗೆ ಅಡ್ಡಗಾಲು ಹಾಕುವ ಮಾನಸಿಕತೆಯನ್ನು ತೋರಿಸುತ್ತದೆ ಎಂದು ಕ್ಯಾ. ಚೌಟ ಆರೋಪಿಸಿದ್ದಾರೆ.













