ಐಕ್ಯತೆಯನ್ನು ಮೂಡಿಸುವಲ್ಲಿ ಕೊಂಕಣಿ ಭಾಷೆಯ ಪಾತ್ರ ಮಹತ್ವವಾದುದು – ಅಮೃತ್ ಶೆಣೈ

Spread the love

ಐಕ್ಯತೆಯನ್ನು ಮೂಡಿಸುವಲ್ಲಿ ಕೊಂಕಣಿ ಭಾಷೆಯ ಪಾತ್ರ ಮಹತ್ವವಾದುದು – ಅಮೃತ್ ಶೆಣೈ

ಉಡುಪಿ: ದೇಶದಲ್ಲಿ ಐಕ್ಯತೆಯನ್ನು ಮೂಡಿಸುವ ನಿಟ್ಟಿನಲ್ಲಿ ಕೊಂಕಣಿ ಭಾಷೆಯ ಪಾತ್ರ ಮಹತ್ವವಾದುದು ಎಐಸಿಸಿ ಸದಸ್ಯ ಹಾಗೂ ಉದ್ಯಮಿ ಅಮೃತ್ ಶಣೈ ಹೇಳಿದರು.

ಅವರು ಭಾನುವಾರ ನಿರಂತರ್ ಉದ್ಯಾವರ ವತಿಯಿಂದ ಉದ್ಯಾವರ ಚರ್ಚಿನ ಆವರಣದಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ ನಿರಂತರ್ ಕೊಂಕಣಿ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಭಾರತ ದೇಶವು ಹಲವು ಜಾತಿ, ಮತ, ಧರ್ಮ, ಭಾಷೆಗಳನ್ನು ಹೊಂದಿದ್ದರೂ ಕೂಡ ಪರಸ್ಪರ ಅನೊನ್ಯತೆಯನ್ನು ಹೊಂದಿದೆ. ಎಲ್ಲಾ ಧರ್ಮದ ಜನರು ಐಕ್ಯತೆಯಿಂದ ಬಾಳಲು ದೇಶದ ಸಂವಿಧಾನ ನಮಗೆ ಅವಕಾಶ ಮಾಡಿಕೊಟ್ಟಿದೆ. ಕೊಂಕಣಿ ಭಾಷೆ ಜನರಲ್ಲಿ ಐಕ್ಯತೆ ಮೂಡಿಸಲು ಪ್ರಮುಖ ಪಾತ್ರವನ್ನು ವಹಿಸಿದೆ ಇದಕ್ಕೆ ಪ್ರಮುಖ ಕಾರಣ ಈ ಭಾಷೆಯನ್ನು ಮೂರು ಧರ್ಮದ ಜನರು ಕೂಡ ಮಾತನಾಡುವುದೇ ಈ ಭಾಷೆಯ ವೈಶಿಷ್ಠ್ಯವಾಗಿದೆ. ಕೊಂಕಣಿ ಭಾಷೆಯನ್ನು ಪ್ರತಿಯೊಬ್ಬರು ಮಾತನಾಡುವ ಮೂಲಕ ಅದನ್ನು ಉಳಿಸಿ ಬೆಳೆಸುವ ಕೆಲಸವನ್ನು ಪ್ರತಿಯೊಬ್ಬರು ಕೂಡ ಮಾಡಬೇಕಾಗಿದೆ. ಕೊಂಕಣಿ ನಾಟಕಗಳಿಗೆ ಪ್ರೋತ್ಸಾಹ ನೀಡುವುದರಿಂದ ಕೊಂಕಣಿ ಭಾಷೆಯ ಕಲಾವಿದರೆಗೆ ಪ್ರೋತ್ಸಾಹ ಲಭಿಸುತ್ತದೆ ಈ ಮೂಲಕ ಕೊಂಕಣಿ ಭಾಷೆಯ ಕೀರ್ತಿ ಎತ್ತರಕ್ಕೆ ಸಾಗಲು ಸಾಧ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚಿನ ಧರ್ಮಗುರು ವಂ| ಆಲ್ಬನ್ ಡಿಸೋಜಾ, ನಾಟಕಕಾರ ಹಾಗೂ ಟ್ರಿನಿಟಿ ಐಟಿಐ ಉದ್ಯಾವರ ಇದರ ಪ್ರಾಂಶುಪಾಲ ಜೋನ್ ಎಂ ಡಿಸೋಜಾ, ಉದ್ಯಾವರ ಸೌಹಾರ್ಧ ಸಮಿತಿಯ ವಿಲ್ಫ್ರೇಡ್ ಡಿಸೋಜಾ, ಉದ್ಯಾವರ ಚರ್ಚಿನ ಸಹಾಯಕ ಧರ್ಮಗುರು ವಂ|ರೋಲ್ವಿನ್ ಆರಾನ್ಹಾ ಇವರುಗಳು ಮುಖ್ಯಅತಿಥಿಯಾಗಿ ಭಾಗವಹಿಸಿ ಸಂಘಟನೆಯ ಚೊಚ್ಚಲ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮೂರುದಿನಗಳ ನಾಟಕದ ಸಂಚಾಲಕ ರೊನಾಲ್ಡ್ ಡಿಸೋಜಾ, ನಾಟಕಕಾರ ಜೋನ್ ಡಿಸೋಜಾ, ಮೂರನೇ ದಿನದ ಸಳ್ಗಿ ನಾಟಕದ ನಿರ್ದೇಶಕ ಕ್ರಿಸ್ಟೋಫರ್ ಇವರುಗಳನ್ನು ಸನ್ಮಾನಿಸಲಾಯಿತು.

ನಿರಂತರ್ ಉದ್ಯಾವರ ಸಂಘಟನೆಯ ಅಧ್ಯಕ್ಷ ಸ್ಟೀವನ್ ಕುಲಾಸೊ ಸ್ವಾಗತಿಸಿ, ರೊನಾಲ್ಡ್ ಡಿಸೋಜಾ ವಂದಿಸಿದರು. ಮೈಕಲ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.


Spread the love