ಐಸಿಸ್ ಉಗ್ರರ ಫೇಸ್ಬುಕ್ ಪುಟ ಲೈಕ್ ಮಾಡಿದ್ದ ಭಟ್ಕಳದ ಯುವಕ ದುಬೈ ಪೊಲೀಸರಿಂದ ಬಂಧನ

Spread the love

ಭಟ್ಕಳ: ಯಾವುದೇ ಗೊತ್ತುಗುರಿ ಇಲ್ಲದ ಫೇಸ್ಬುಕ್, ವಾಟ್ಸ್‍ಅಪ್ ಸಂದೇಶಗಳು ಪೊಲೀಸ್ ಕಂಬಿ ಎಣಿಸುವಂತೆ ಮಾಡಬಲ್ಲವು ಎನ್ನುವುದಕ್ಕೆ ದುಬೈಯ ವಲ್ಡ್ ಟ್ರೇಡ್ ಸೆಂಟರ್ ನಲ್ಲಿ ಉದ್ಯೋಗಿಯಾಗಿದ್ದ ಭಟ್ಕಳದ ಅದ್ನಾನ್ ಹುಸೇನ್ ದಾಮೂದಿ(32) ಎನ್ನುವ ಯುವಕ ಜೀವಂತ ಸಾಕ್ಷಿಯಾಗಿದ್ದಾನೆ.
ಫೇಸ್ಬುಕ್ ಒಂದರಲ್ಲಿ ಐಸಿಸ್ ಪರ ಕಾಮೆಂಟ್ ಗಳನ್ನು ಲೈಕ್ ಮಾಡಿದಕ್ಕೆ ಇಂದು ದುಬೈ ಪೊಲೀಸರ ಅತಿಥಿಯಾಗಿ ಜೈಲು ಕಂಬಿ ಎಣಿಸುತ್ತಿರುವ ಭಟ್ಕಳದ ಅದ್ನಾನ್ ಹುಸೇನ್ ದಾಮೂದಿ ಎನ್ನುವ ಯುವಕ ತಾನು ಮಾಡಿದ ತಪ್ಪಿಗೆ ಮನೆಮಂದಿಯನ್ನು ತೊರೆದು ಜೈಲು ವಾಸ ಅನುಭವಿಸುತ್ತಿದ್ದಾನೆ.
ಇಲ್ಲಿನ ಮಾಧ್ಯಮಗಳು ಈ ಕುರಿತಂತೆ ಊಹಾಪೋಹದ ವರದಿಗಳನ್ನು ಮಾಡಿದ್ದು ಈತ ಐಸಿಸ್ ಗೆ ಯುವಕರನ್ನು ನೇಮಿಸುತ್ತಿದ್ದ ಎಂದು ಬರೆದುಕೊಂಡಿವೆ. ಈ ಕುರಿತಂತೆ ದುಬೈಯಲ್ಲಿ ಉದ್ಯೋಗಿಯಾಗಿರುವ ಬಂಧಿತ ಯುವಕನ ತಂದೆ ಹುಸೇನ್ ದಾಮೂದಿ ದುಬೈ ಪೊಲೀಸ್ ವರದಿಯನ್ನು ಉಲ್ಲೇಖಿಸಿ ನನ್ನ ಮಗ ಕೇವಲ ಐಸಿಸ್ ಫೇಸ್ಬುಕ್ ಲೈಕ್ ಮಾಡಿದ್ದ ಮತ್ತು ಕಾಮೆಂಟ್ ಮಾಡಿದ್ದ ಇದನ್ನು ಆಧರಿಸಿ ಆತನ ಬಂಧನ ಮಾಡಲಾಗಿದೆ. ಇದಕ್ಕೂ ಹೆಚ್ಚು ಆತ ಯಾವ ಅಪರಾಧವನ್ನು ಮಾಡಿಲ್ಲ. ಐಸಿಸ್ ಗೆ ಯುವಕರನ್ನು ನೇಮಿಸುತ್ತಿದ್ದ ಎಂಬ ವರದಿಯು ಮಾಧ್ಯಮಗಳ ಸೃಷ್ಟಿಯಾಗಿದ್ದು ನನ್ನ ಮಗ ಯಾವುದೇ ಅಪರಾಧ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಅದ್ನಾನ್ ಹುಸೇನ್ ದಾಮೂದಿಯ ಬಂಧನ ಕಳೆದ 2 ತಿಂಗಳ ಹಿಂದೆಯೆ ದುಬೈ ಪೊಲೀಸ್ ರಿಂದ ಆಗಿದ್ದು ಅದು ಈಗ ಮಾಧ್ಯಮಗಳ ಮೂಲಕ ಹೊರಬಂದಿದೆ. ದಾಮೂದಿ ಮಾಡಿದ ಅಪರಾಧ ಸಾಬೀತಾದರೆ ಈತನನ್ನು ಭಾರತಕ್ಕೆ ಮರಳಿಸಲಾಗುವುದು ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾಗಿ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
2012 ರಿಂದ ದುಬೈಯ ವಲ್ಡ್ ಟ್ರೆಡ್ ಸೆಂಟರ್ ನಲ್ಲಿ ಉದ್ಯೋಗಿಯಾಗಿರುವ ಅದ್ನಾನ್ ದಾಮೂದಿ ವಾಣಿಜ್ಯ ಪದವಿಧರನಾಗಿದ್ದು ತನ್ನ ಉದ್ಯೋಗದಲ್ಲಿ ಕಾರ್ಯಕ್ಷಮತೆಯನ್ನು ಹೊಂದಿದ್ದ ಎಂದು ಆರೋಪಿ ತಂದೆ ಹುಸೇನ್ ದಾಮೂದಿ ತಿಳಿಸಿದ್ದಾರೆ.
ಮಾಧ್ಯಮಗಳು ಈತನ ಮೇಲೆ ಮಾಡಿರುವ ಆರೋಪಗಳು ಎಷ್ಟರ ಮಟ್ಟಿಗೆ ನೈಜ್ಯತೆಯಿಂದ ಕೂಡಿದೆ ಎನ್ನುವುದು ತನಿಖೆಯಿಂದಲೆ ತಿಳಿದುಬರಬೇಕಾಗಿದೆ.


Spread the love