ಕಂಡಕ್ಟರ್‌ ಟಿಕೆಟ್‌ ನೀಡದಿದ್ದರೆ  ಉಚಿತವಾಗಿ ಪ್ರಯಾಣಿಸಿ -ಪೊಲೀಸ್‌ ಆಯುಕ್ತ ಡಾ| ಹರ್ಷ

Spread the love

ಕಂಡಕ್ಟರ್‌ ಟಿಕೆಟ್‌ ನೀಡದಿದ್ದರೆ  ಉಚಿತವಾಗಿ ಪ್ರಯಾಣಿಸಿ -ಪೊಲೀಸ್‌ ಆಯುಕ್ತ ಡಾ| ಹರ್ಷ

ಮಂಗಳೂರು: ಖಾಸಗಿ ಬಸ್‌ಗಳಲ್ಲಿ ಕಂಡಕ್ಟರ್‌ ಟಿಕೆಟ್‌ ನೀಡದಿದ್ದರೆ ಪ್ರಯಾಣ ದರವನ್ನು ನೀಡದೆ ಉಚಿತವಾಗಿ ಪ್ರಯಾಣಿಸಿ. ನಿರ್ವಾಹಕರು ಕಿರುಕುಳ ನೀಡಿದಲ್ಲಿ ಬಸ್‌ ಮಾಲಕರ ಸಂಘದ ಮುಖ್ಯಸ್ಥರ ವಾಟ್ಸಾಪ್‌ ನಂಬರಿಗೆ ಬಸ್‌ ನಂಬರು ಸಹಿತ ದೂರು ನೀಡಿ ಎಂದು ಪೊಲೀಸ್‌ ಆಯುಕ್ತ ಡಾ| ಹರ್ಷ ಖಡಕ್‌ ಸೂಚನೆ ನೀಡಿದ್ದಾರೆ.

ಶುಕ್ರವಾರ ತಮ್ಮ ಕಚೇರಿಯಲ್ಲಿ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಸುದ್ದಿ ಗಾರರ ಪ್ರಶ್ನೆಗೆ ಉತ್ತರಿಸಿ  ‘ಮೋಟಾರು ವಾಹನ ಕಾಯ್ದೆ ಮತ್ತು ನಿಯಮಗಳ ಪ್ರಕಾರ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಟಿಕೆಟ್‌ ನೀಡು
ವುದು ಕಡ್ಡಾಯ. ವಾಟ್ಸ್‌ ಆ್ಯಪ್‌ ಸಂಖ್ಯೆ 7996999977 ಮೂಲಕ ಪ್ರಯಾಣಿಕರು ದಕ್ಷಿಣ ಕನ್ನಡ ಜಿಲ್ಲಾ ಬಸ್‌ ಮಾಲೀಕರ ಸಂಘಕ್ಕೆ ದೂರು ಸಲ್ಲಿಸಬಹುದು’ ಎಂದರು.

ನಗರದ ವ್ಯಾಪ್ತಿಯಲ್ಲಿ ಖಾಸಗಿ ಬಸ್‌ಗಳಲ್ಲಿ ಟಿಕೆಟ್‌ ಕೊಡದಿದ್ದರೆ ಪ್ರಯಾಣಿಕರು ಬಸ್‌ ಮಾಲೀಕರ ಸಂಘದ ಮೊಬೈಲ್‌ ಸಂಖ್ಯೆಗೆ ನೇರವಾಗಿ ದೂರು ಕೊಡಬಹುದು. ಸಂಚಾರ ವಿಭಾಗದ ಪೊಲೀಸ್‌ ಇನ್‌ಸ್ಪೆಕ್ಟರ್‌ಗಳು ವಾರಕ್ಕೊಮ್ಮೆ ಈ ದೂರುಗಳನ್ನು ಪರಿಶೀಲಿಸಿ ಕ್ರಮ ಜರುಗಿಸುತ್ತಾರೆ. ‘ನಿರ್ವಾಹಕರು ಟಿಕೆಟ್‌ ನೀಡಿದಿದ್ದರೆ ಹಣ ನೀಡಬೇಡಿ’ ಎಂದು ಬಸ್‌ ಮಾಲೀಕರ ಸಂಘ ಸೆಪ್ಟೆಂಬರ್‌ ತಿಂಗಳಿನಲ್ಲೇ ಮನವಿ ಮಾಡಿತ್ತು. ಆದರೂ, ಟಿಕೆಟ್‌ ನೀಡದೇ ಬಸ್‌ ಓಡಿಸುವ ಪ್ರವೃತ್ತಿ ನಗರದಲ್ಲಿ ಯಥಾವತ್ತಾಗಿ ಮುಂದುವರಿದಿದೆ.

ಟಿಕೆಟ್‌ ರಹಿತ ಪ್ರಯಾಣವನ್ನು ಅಕ್ರಮ ಎಂದು ಪರಿಗಣಿಸಲಾಗುತ್ತದೆ. ನಗರ ಸಾರಿಗೆ ಬಸ್‌ಗಳಲ್ಲಿ ನಿರ್ವಾಹಕರು ಹಣ ಪಡೆದು ಟಿಕೆಟ್‌ ನೀಡುವುದಿಲ್ಲ ಎಂಬುದಾಗಿ ನಿತ್ಯವೂ ಹತ್ತಾರು ದೂರು ಗಳು ಬರುತ್ತಿವೆ. ಇದನ್ನು ಗಂಭೀರ
ವಾಗಿ ಪರಿಗಣಿಸಲಾಗಿದೆ ಎಂದು ಹೇಳಿದರು.

ಬಸ್‌ಗಳಲ್ಲಿ ಕರ್ಕಶ ಹಾರ್ನ್, ನಿಗದಿತ ಪ್ರಮಾಣಕ್ಕಿಂತ ಅಧಿಕ ಶಬ್ದದ ಹಾರ್ನ್ ಬಳಸ ಬಾರದೆಂದು ಕಾನೂನಿನಲ್ಲಿಯೇ ನಿರ್ಬಂಧವಿದೆ. ಹಾಗಿದ್ದರೂ ಬಳಕೆ ಮುಂದುವರಿದಿದೆ. ಇಂತಹ ಹಾರ್ನ್ ಗಳನ್ನು ಅಳವಡಿಸುವ ಬಸ್‌ಗಳ ಮಾಲ ಕರಿಗೆ ದಂಡ ವಿಧಿಸುವುದು ಮಾತ್ರವಲ್ಲ, ಇನ್ನು ಮುಂದೆ ನಿರ್ಬಂಧಿತ ಹಾರ್ನ್ಗಳ ಮಾರಾಟಗಾರರಿಗೂ ನೋಟೀಸ್‌ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಆಯುಕ್ತರು ಅಧಿಕಾರಿಗಳಿಗೆ ನಿರ್ದೇಶಿಸಿದರು.

ರಾಜವರ್ಮ ಬಲ್ಲಾಳ್‌, ದಿಲ್‌ರಾಜ್‌ ಆಳ್ವ, ಡಿಸಿಪಿಗಳಾದ ಅರುಣಾಂಶು ಗಿರಿ, ಲಕ್ಷ್ಮೀ ಪ್ರಸಾದ್‌, ಎಸಿಪಿಗಳಾದ ಮಂಜುನಾಥ ಶೆಟ್ಟಿ, ವಿನಯ್‌ ಎ. ಗಾಂವ್‌ಕರ್‌, ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಾದ ಜಿ.ಕೆ. ಭಟ್‌, ಅಮಾನುಲ್ಲಾ, ಮೋಹನ್‌ ಕೊಟ್ಟಾರಿ, ಗುರುದತ್ತ ಕಾಮತ್‌, ಎಎಸ್‌ಐ ಬಾಲಕೃಷ್ಣ, ಹೆಡ್‌ ಕಾನ್‌ ಸ್ಟೆಬಲ್‌ ಪುರುಷೋತ್ತಮ ಉಪಸ್ಥಿತರಿದ್ದರು.


Spread the love