ಕಂದಾಯ ಅದಾಲತ್‍ನಲ್ಲಿ 55 ಅರ್ಜಿಗಳು ಸ್ಥಳದಲ್ಲೇ ಇತ್ಯರ್ಥ  

Spread the love

ಕಂದಾಯ ಅದಾಲತ್‍ನಲ್ಲಿ 55 ಅರ್ಜಿಗಳು ಸ್ಥಳದಲ್ಲೇ ಇತ್ಯರ್ಥ  

ಮಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರಾದ ಯು ಟಿ ಖಾದರ್ ಅವರ ಅಧ್ಯಕ್ಷತೆಯಲ್ಲಿ ಇಂದು ನಗರದ ಪುರಭವನದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಕಂದಾಯ ಅದಾಲತ್‍ನಲ್ಲಿ ಒಟ್ಟು 55 ಅರ್ಜಿದಾರರಿಗೆ ಸ್ಥಳದಲ್ಲಿಯೇ ಪರಿಹಾರವನ್ನು ನೀಡಲಾಗಿದ್ದು, ಉಳಿದ ಅರ್ಜಿಗಳಿಗೆ ಸಮಯಮಿತಿಯೊಳಗೆ ಪರಿಹಾರ ಹಾಗೂ ಉತ್ತರ ನೀಡಲಾಗುವುದು ಎಂದು ವಸತಿ ಮತ್ತು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಹೇಳಿದರು.

ಕಂದಾಯ ಅದಾಲತ್ ಕಾರ್ಯಕ್ರಮ ಆಯೋಜನೆಯಿಂದಾಗಿ ಹಲವು ವರ್ಷಗಳಿಂದ ಬಾಕಿ ಉಳಿದ ಜನರ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ನೀಡಲು ಸಾಧ್ಯವಾಗಿದೆ ಎಂದ ಸಚಿವರು, ಜಿಲ್ಲೆಯ ಜನರಿಗೆ ಕಂದಾಯ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಉದೇಶದಿಂದ ಜಿಲ್ಲಾ ಮಟ್ಟದ ಅದಾಲತ್ ಆಯೋಜಿಸಿದೆ. ಹಲವರಿಗೆ ಮಾಹಿತಿ ಕೊರತೆಯಿಂದ ನೇರ ಸ್ಪಂದನೆಗೆ ಅವಕಾಶಗಳು ಲಭ್ಯವಾಗುತ್ತಿಲ್ಲ; ಮಧ್ಯವರ್ತಿಗಳ ಹಾವಳಿ ತಡೆಗೆ ಅದಾಲತ್‍ಗಳು ನೆರವಾಗಲಿದೆ ಎಂದರು.

ಪದವಿನಂಗಡಿ ಸತೀಶ್ ಕಾಮತ್ ಎಂಬವರು ಹತ್ತು ವರ್ಷದಿಂದ ಆರ್‍ಟಿಸಿ ತಿದ್ದುಪಡಿಗೆ ಓಡಾಡುತ್ತಿದ್ದು, ಈ ಅದಾಲತ್‍ನಿಂದ ಸಮಸ್ಯೆಗೆ ಪರಿಹಾರ ದೊರೆತಿದೆ ಎಂಬುದು ಸಂತಸದ ವಿಷಯ; ಹಕ್ಕುಪತ್ರಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ್ದ ಪುರುಷೋತ್ತಮ ಎಂಬವರಿಗೂ ಇಂದು ಹಕ್ಕುಪತ್ರ ದೊರೆತಿದೆ. ಮಿತ್ತನಡ್ಕ ದೇವಾಲಯಕ್ಕೆ ಸಂಬಂಧಿಸಿದ ಐದು ಅರ್ಜಿಗಳನ್ನು ಅದಾಲತ್‍ನಲ್ಲಿ ಸ್ವೀಕರಿಸಲಾಗಿದ್ದು, ಸಂಬಂಧಪಟ್ಟವರು ಅದಾಲತ್‍ಗೆ ಹಾಜರಾಗಿರಲಿಲ್ಲ.

ಒಟ್ಟು 185 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಇಂದು 55 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. ಆರ್‍ಟಿಸಿಗೆ ಸಂಬಂಧಪಟ್ಟ ಹಲವು ಅರ್ಜಿಗಳಿದ್ದವು. ಪ್ಲಾಟ್ ಸರ್ವೇ ಬಗ್ಗೆ ಯುಪಿಒಆರ್ ಕಾರ್ಡ್ ಮಾಡಿಸುವುದರಿಂದ ಸಮಸ್ಯೆ ಪರಿಹಾರವಾಗಲಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು. ಕುಮ್ಕಿ ಅತಿಕ್ರಮಣದ ಬಗ್ಗೆ, ಲ್ಯಾಂಡ್ ಟ್ರಿಬ್ಯುನಲ್ ಸರ್ಟಿಫೈಡ್ ಪ್ರತಿಯನ್ನು ಕೇಳಿ, ಜಾಗಕ್ಕೆ ರಸ್ತೆ ಸಂಪರ್ಕ ಇಲ್ಲದ ಬಗ್ಗೆ ಅರ್ಜಿಗಳಿದ್ದವು.

ಕೆಲಸ ಮಾಡಿಕೊಡುವ ವೇಳೆ ಭ್ರಷ್ಟಾಚಾರದ ಬಗ್ಗೆ ಉಲ್ಲೇಖ ಮಾಡಿದ ಅರ್ಜಿದಾರರಿಗೆ ಎಸಿಬಿಗೆ ದೂರು ನೀಡಲು ಜಿಲ್ಲಾಧಿಕಾರಿ ಸೂಚಿಸಿದರು. ಕಂದಾಯ ಅದಾಲತ್‍ನಲ್ಲಿ ಇಲಾಖಾ ಕಾರ್ಯದರ್ಶಿ ಡಾ ರಾಜ್‍ಕುಮಾರ್ ಕತ್ರಿ, ಅಪರ ಜಿಲ್ಲಾಧಿಕಾರಿ ಕುಮಾರ್, ಪುತ್ತೂರು ಉಪವಿಭಾಗಾಧಿಕಾರಿ ಕೃಷ್ಣಮೂರ್ತಿ, ಮಂಗಳೂರು ಉಪವಿಭಾಗಾಧಿಕಾರಿ ರವಿಚಂದ್ರ ನಾಯಕ್, ತಹಸೀಲ್ದಾರ್ ಗುರುಪ್ರಸಾದ್, ಮಹಾನಗರಪಾಲಿಕೆಯಿಂದ ಅಭಿವೃದ್ಧಿ ಆಯುಕ್ತರಾದ ಗಾಯತ್ರಿ ನಾಯಕ್ ಇದ್ದರು.


Spread the love