ಕಂಬಳದಲ್ಲಿ ಕಠಿಣ ನಿಯಮ, ಇನ್ಮುಂದೆ ನಿಶಾನೆಗೆ ನೀರು ಹಾಯಿಸಿದ್ರೆ ಮಾತ್ರ ಬಹುಮಾನ !

Spread the love

ಕಂಬಳದಲ್ಲಿ ಕಠಿಣ ನಿಯಮ, ಇನ್ಮುಂದೆ ನಿಶಾನೆಗೆ ನೀರು ಹಾಯಿಸಿದ್ರೆ ಮಾತ್ರ ಬಹುಮಾನ !

ಮಂಗಳೂರು: ಕಂಬಳದಲ್ಲಿ ಶಿಸ್ತು ಮತ್ತು ಸಮಯಪಾಲನೆಗೆ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಕನೆ ಹಲಗೆ ವಿಭಾಗದಲ್ಲಿ ನಿಗದಿತ ನಿಶಾನೆಗೆ ನೀರು ಹಾಯಿಸಿದರೆ ಮಾತ್ರ ಬಹುಮಾನ ನೀಡಲಾಗುವುದು. ಅಲ್ಲದೆ, ಕೋಣಗಳನ್ನು ಇಳಿಸಲು ಮತ್ತು ಬಿಡಲು ನಿರ್ದಿಷ್ಟ ಸಮಯ ನಿಗದಿಪಡಿಸಲಾಗಿದ್ದು, 24 ಗಂಟೆಯೊಳಗೆ ಕಂಬಳ ಪಂದ್ಯಗಳನ್ನು ಮುಗಿಸಲು ಆದ್ಯತೆ ನೀಡಲಾಗಿದೆ.

ನಗರದಲ್ಲಿ ರಾಜ್ಯ ಕಂಬಳ ಅಸೋಸಿಯೇಶನ್‌ ಅಧ್ಯಕ್ಷ ಬೆಳಪು ದೇವಿಪ್ರಸಾದ್‌ ಶೆಟ್ಟಿ ನೇತೃತ್ವದಲ್ಲಿ ಈ ಋುತುವಿನ ಕಂಬಳ ವ್ಯವಸ್ಥೆ, ನಿಯಮಗಳ ಬಗ್ಗೆ ಸಭೆ ನಡೆಯಿತು. ಕಂಬಳ ಸಮಿತಿ, ಅಸೋಸಿಯೇಶನ್‌ ಪದಾಧಿಕಾರಿಗಳು, ಕಂಬಳ ಸಂಘಟಕರು, ಕೋಣಗಳ ಯಜಮಾನರು, ತೀರ್ಪುಗಾರರು, ಕೋಣ ಬಿಡುವವರು, ಓಟಗಾರರು ಸಭೆಯಲ್ಲಿ ಭಾಗವಹಿಸಿದ್ದರು.

ಕಂಬಳದ ಕನೆ ಹಲಗೆ ವಿಭಾಗದಲ್ಲಿ ಕೋಣಗಳು ನಿಶಾನೆಗೆ ನೀರು ಹಾಯಿಸದೆ ಇದ್ದರೆ ಕೋಣ ಓಟದ ವೇಳೆ ನೀರು ಹಾಯಿಸುವ ಎತ್ತರವನ್ನು ನೋಡಿ ಬಹುಮಾನ ನಿರ್ಧರಿಸಲಾಗುತ್ತಿತ್ತು. ಇದು ಕೆಲವೊಮ್ಮೆ ಗೊಂದಲ, ಚರ್ಚೆಗೂ ಕಾರಣವಾಗುತ್ತಿದ್ದ ಹಿನ್ನೆಲೆಯಲ್ಲಿ ಈ ವರ್ಷದಿಂದ 6.5 ಮತ್ತು 7.5 ಕೋಲು ನಿಶಾನೆಗೆ ನೀರು ಹಾಯಿಸಿದರೆ ಮಾತ್ರ ಬಹುಮಾನ ನೀಡಲು ನಿರ್ಧರಿಸಲಾಯಿತು. ಈ ಹಿಂದೆ ಕನೆ ಹಲಗೆ ವಿಭಾಗದಲ್ಲಿ 4 (ಪಾಸ್‌) ಸುತ್ತುಗಳ ಓಟಕ್ಕೆ ಅವಕಾಶವಿತ್ತು, ಈ ವರ್ಷದಿಂದ ನಿಗದಿತ ಸಮಯ 3.30 ಗಂಟೆಯೊಳಗೆ 5 ಸುತ್ತು ಓಡಿಸಲು ಅವಕಾಶವಿದೆ. 3.30 ಗಂಟೆಯೊಳಗೆ 5 ಸುತ್ತು ಓಡಿಸದಿದ್ದಲ್ಲಿ ಆ ಬಳಿಕ ಓಡಿಸಲು ಅವಕಾಶವಿಲ್ಲ.

ಈ ಋುತುವಿನ ಕಂಬಳವನ್ನು ನಿಯಮದಂತೆ 24 ಗಂಟೆಯೊಳಗೆ ಮುಗಿಸುವುದು ಎಲ್ಲರ ಜವಾಬ್ದಾರಿ ಹಾಗೂ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲೂ ಕಂಬಳ ಅಸೋಸಿಯೇಶನ್‌ ಕೆಲವೊಂದು ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದೆ.

ಅಡ್ಡಹಲಗೆ, ನೇಗಿಲು, ಹಗ್ಗ ಕಿರಿಯ ವಿಭಾಗದಲ್ಲಿ ಒಂದು ಸ್ಪರ್ಧೆ ಮುಗಿದ ಬಳಿಕ ಕೋಣ ಗಂತಿಗೆ ಇಳಿಸಲು 3 ನಿಮಿಷ ಕಾಲಾವಕಾಶ ನೀಡಲಾಗಿದೆ. ಅದಕ್ಕಿಂತ ವಿಳಂಬ ಮಾಡಿದರೆ ಅವಕಾಶ ನಿರಾಕರಣೆಯ ಕಠಿಣ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಪ್ರತಿ ವಿಭಾಗದಲ್ಲೂ ಕೋಣ ಬಿಡಲು 5 ನಿಮಿಷದ ಕಾಲಾವಕಾಶ ನೀಡಲಾಗಿದೆ. ಇದೇ ಮಾದರಿ ಅಡ್ಡಹಲಗೆ, ನೇಗಿಲು, ಹಗ್ಗ ಹಿರಿಯ ವಿಭಾಗದಲ್ಲಿ ಒಂದು ಸ್ಪರ್ಧೆ ಮುಗಿದ ಬಳಿಕ ಕೋಣ ಗಂತಿಗೆ ಇಳಿಸಲು 5 ನಿಮಿಷದ ಕಾಲಾವಕಾಶ ನೀಡಲಾಗಿದೆ.

ಸ್ಪರ್ಧೆಯಲ್ಲೂ ಹಗ್ಗ ಕಿರಿಯ (8 ನಿಮಿಷ) ಮತ್ತು ನೇಗಿಲು ಕಿರಿಯ (6 ನಿಮಿಷ) ವಿಭಾಗಕ್ಕೆ ಕೋಣ ಬಿಡಲು ಅವಕಾಶ ನೀಡಲಾಗಿದೆ. ಫೈನಲ್‌ಗೆ ಎರಡೂ ವಿಭಾಗಕ್ಕೆ 10 ನಿಮಿಷದ ಅವಕಾಶ ನೀಡಲಾಗಿದೆ. ಹಗ್ಗ ಹಿರಿಯ 12 ನಿಮಿಷ ಮತ್ತು ನೇಗಿಲು ಹಿರಿಯ 10 ನಿಮಿಷ, ಅಡ್ಡ ಹಲಗೆಗೆ 10 ನಿಮಿಷ ಕೋಣ ಬಿಡಲು ಅವಕಾಶ ನೀಡಲಾಗಿದೆ. ಫೈನಲ್‌ನಲ್ಲಿ ಈ ಜೋಡಿಗಳಿಗೆ 15 ನಿಮಿಷ ಅವಕಾಶ ನೀಡಲಾಗಿದೆ. ಎಲ್ಲ ವಿಭಾಗದಲ್ಲೂ ತೀರ್ಪುಗಾರರ ನಿರ್ಣಯವೇ ಅಂತಿಮವಾಗಿದ್ದು, ಯಾವುದೇ ಕಾರಣಕ್ಕೂ ಅದನ್ನು ಪ್ರಶ್ನಿಸುವಂತಿಲ್ಲ ಎಂದು ನಿರ್ಧಾರಕ್ಕೆ ಬರಲಾಗಿದೆ.


Spread the love
Subscribe
Notify of

0 Comments
Inline Feedbacks
View all comments