ಕಡಲ ಕೊರೆತ ಕಾಮಗಾರಿ:ಸ್ಥಳೀಯರ ವಿಶ್ವಾಸ ತೆಗೆದುಕೊಳ್ಳಲು ಸ್ಪೀಕರ್ ಯು ಟಿ ಖಾದರ್ ಸೂಚನೆ
ಮಂಗಳೂರು: ಕಡಲ ಕೊರೆತ ಕಾಮಗಾರಿಗಳನ್ನು ನಡೆಸುವಾಗ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ನಡೆಸುವಂತೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಸೂಚಿಸಿದರು.
ಅವರು ಬುಧವಾರ ನಗರದ ಸಕ್ರ್ಯೂಟ್ ಹೌಸ್ ನಲ್ಲಿ ಈ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಕಡಲ ಕೊರೆತ ಕಾಮಗಾರಿ ನಡೆಸುವಾಗ ಅಧಿಕಾರಿಗಳು ಸ್ಥಳೀಯ ಪ್ರದೇಶಕ್ಕೆ ಸೂಕ್ತವಲ್ಲದ ತಂತ್ರಜ್ಞಾನದಿಂದ ಕಾಮಗಾರಿ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಆಕ್ಷೇಪಣೆಗಳು ಬರುತ್ತಿದೆ. ಕಡಲ ಅಲೆಗಳ ಅಬ್ಬರವು ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯಲ್ಲಿರುತ್ತದೆ. ಸ್ಥಳೀಯ ಮೀನುಗಾರರು ಹಾಗೂ ಇತರೆ ಕಡಲತೀರ ನಿವಾಸಿಗಳು ಹಲವು ದಶಕಗಳಿಂದ ಕಡಲತೀರದಲ್ಲಿ ವಾಸಿಸುತ್ತಿದ್ದು ಕಡಲ ಅಲೆಗಳ ಏರಿಳಿತದ ಬಗ್ಗೆ ಅನುಭವದ ಮಾಹಿತಿ ಹೊಂದಿದ್ದಾರೆ. ಇವರ ಅಭಿಪ್ರಾಯ ಆಲಿಸಿ ಕಾಮಗಾರಿಯನ್ನು ನಡೆಸಬೇಕು ಎಂದು ವಿಧಾನಸಭೆ ಸ್ಪೀಕರ್ ತಿಳಿಸಿದರು.
ಈಗಾಗಲೇ ಸರಕಾರವು ಸಮುದ್ರ ಪ್ರತಿಬಂಧಕ ಕಾಮಗಾರಿಗಳಿಗೆ ಕರಾವಳಿ ತೀರದ 3 ಜಿಲ್ಲೆಗಳಿಗೆ 200 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಈ ಅನುದಾನದಲ್ಲಿ ಅಲ್ಲಲ್ಲಿ ಅಲ್ಪ ಸ್ವಲ್ಪ ಕಾಮಗಾರಿ ನಡೆಸುವ ಬದಲು ಅತಿ ಹೆಚ್ಚು ಕಡಲ ಕೊರೆತ ಉಂಟಾಗುವ ಪ್ರದೇಶಗಳಲ್ಲಿ ನಿರ್ದಿಷ್ಟ ಕಾಮಗಾರಿ ನಡೆಸಿ ಪೂರ್ಣಗೊಳಿಸುವಂತೆ ಅವರು ತಿಳಿಸಿದರು.
ಉಳ್ಳಾಲ ಕೋಟೆಪುರದಲ್ಲಿ ಮೀನುಗಾರಿಕೆ ಜೆಟ್ಟಿ ಕಾಮಗಾರಿಯನ್ನು ಶೀಘ್ರವೇ ಪ್ರಾರಂಭಿಸಬೇಕು. 150 ಮೀಟರ್ ಜೆಟ್ಟಿಗೆ ಸೂಕ್ತವಾದ ಸ್ಥಳ ನೀಡಬೇಕು. ಇದಕ್ಕೆ ಸಂಬಂಧಪಟ್ಟ ಎಲ್ಲಾ ಪ್ರಕ್ರಿಯೆಗಳನ್ನು ತ್ವರಿತ ಗತಿಯಲ್ಲಿ ಮುಗಿಸುವಂತೆ ಯು.ಟಿ. ಖಾದರ್ ಸೂಚಿಸಿದರು.
ಸಭೆಯಲ್ಲಿ ಕರ್ನಾಟಕ ಜಲ ಸಾರಿಗೆ ಮಂಡಳಿಯ ಚೀಫ್ ಇಂಜಿನಿಯರ್ ದಿವಾಕರ್ ನಾಯಕ್, ಮೀನುಗಾರಿಕೆ ಜಂಟಿ ನಿರ್ದೇಶಕ ಸಿದ್ದಯ್ಯ, ಉಪ ನಿರ್ದೇಶಕ ದಿಲೀಪ್, ಸಿ.ಆರ್.ಝೆಡ್ ಪ್ರಾದೇಶಿಕ ನಿರ್ದೇಶಕ ರಘು, ಸುಶ್ಮಿತಾ, ಉಳ್ಳಾಲ ತಹಶೀಲ್ದಾರ್ ಪುಟ್ಟರಾಜು ಮತ್ತಿತರರು ಉಪಸ್ಥಿತರಿದ್ದರು.