ಕರಾವಳಿಯ ಹಿರಿಯ ರಾಜಕಾರಣಿ, ಮಾಜಿ ಸಚಿವ ಬಿ ಎ ಮೊಹಿದಿನ್ ನಿಧನ

Spread the love

ಕರಾವಳಿಯ ಹಿರಿಯ ರಾಜಕಾರಣಿ, ಮಾಜಿ ಸಚಿವ ಬಿ ಎ ಮೊಹಿದಿನ್ ನಿಧನ

ಬೆಂಗಳೂರು : ಮಾಜಿ ಉನ್ನತ ಶಿಕ್ಷಣ ಸಚಿವ, ಹಿರಿಯ ರಾಜಕೀಯ ಮುತ್ಸದ್ದಿ ಬಿ.ಎ. ಮೊಹಿದಿನ್ (81) ಅವರು ಮಂಗಳವಾರ ಮುಂಜಾನೆ ಅಲ್ಪ ಕಾಲದ ಅಸೌಖ್ಯದ ಬಳಿಕ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಇತ್ತೀಚೆಗೆ ಅನಾರೋಗ್ಯಕ್ಕೆ ಈಡಾಗಿದ್ದ ಬಿ.ಎ. ಮೊಹಿದಿನ್ ಅವರು ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತಿದ್ದರು. ಚಿಕಿತ್ಸೆಯಿಂದ ಚೇತರಿಸಿಕೊಂಡ ಬಳಿಕ ಕಳೆದ ವಾರ ಬೆಂಗಳೂರಿಗೆ ತೆರಳಿದ್ದರು. ಅಲ್ಲಿ ಮತ್ತೆ ಅನಾರೋಗ್ಯಕ್ಕೆ ಒಳಗಾದ ಅವರು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ಮುಂಜಾನೆ ಸುಮಾರು 6 ಗಂಟೆಗೆ ಅಲ್ಲಿ ನಿಧನರಾಗಿದ್ದಾರೆ.

ಸುಮಾರು 8 ಗಂಟೆಗೆ ಮೊಹಿದಿನ್ ಅವರ ಪ್ರಾರ್ಥಿವ ಶರೀರವನ್ನು ಬೆಂಗಳೂರಿನ ಸಂಜಯ ನಗರದಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಗುವುದು. ಅಲ್ಲಿ ಸುಮಾರು 11 ಗಂಟೆಯ ವರೆಗೆ ಸಾರ್ವಜನಿಕರ ದರ್ಶನಕ್ಕೆ ಇಟ್ಟು ಬಳಿಕ ಮಂಗಳೂರಿಗೆ ಕೊಂಡೊಯ್ಯಲಾಗುವುದು ಎಂದು ಮೂಲಗಳು ತಿಳಿಸಿವೆ.

ದೇವರಾಜು ಅರಸು ನಿಕಟವರ್ತಿಯಾಗಿ ರಾಜಕೀಯ ಪ್ರವೇಶಿಸಿದ ಮೊಹಿದೀನ್ ಅವರು ಕಾಂಗ್ರೆಸ್ ಹಾಗೂ ಜನತಾ ಪಾಳಯದಲ್ಲಿ ಸಮವಾಗಿ ಮಿಂಚಿದರು. 1978ರಲ್ಲಿ ಬಂಟ್ವಾಳದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ಕಾಂಗ್ರೆಸ್ ನ ಬಂಡಾಯ ಕಾಲದಲ್ಲಿ ಅರಸು ಪಾಳಯದಲ್ಲಿದ್ದ ಕಾರಣ ಅವರಿಗೆ ನಂತರ ಚುನಾವಣೆಯಲ್ಲಿ ಟಿಕೇಟ್ ನಿರಾಕರಿಸಲಾಗಿತ್ತು. ಬಿ.ಎ ಮೊಹಿದೀನ್ ಅವರು ಒಂದು ಬಾರಿ ಶಾಸಕರಾಗಿ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದು, ಒಂದು ಬಾರಿ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.

 


Spread the love