ಕರಾವಳಿ ಗೌರವ ಪ್ರಶಸ್ತಿಗೆ ಪ್ರೊ. ಹಿಲ್ಡಾ ರಾಯಪ್ಪನ್ ಆಯ್ಕೆ

Spread the love

ಕರಾವಳಿ ಗೌರವ ಪ್ರಶಸ್ತಿಗೆ ಪ್ರೊ. ಹಿಲ್ಡಾ ರಾಯಪ್ಪನ್ ಆಯ್ಕೆ

ಮಂಗಳೂರು : 2018-19ನೇ ಸಾಲಿನ ಕರಾವಳಿ ಉತ್ಸವ ಸಂಧರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆಗೈದಿರುವ ಓರ್ವ ಸಾಧಕರಿಗೆ “ಕರಾವಳಿ ಗೌರವ ಪ್ರಶಸ್ತಿ” ಯನ್ನು ನೀಡಿ ಗೌರವಿಸಿಕೊಂಡು ಬರಲಾಗುತ್ತಿದೆ. ಇದರಂತೆ ಈ ಬಾರಿ ಸದ್ರಿ ಕರಾವಳಿ ಗೌರವ ಪ್ರಶಸ್ತಿಗೆ ಪ್ರೊ. ಹಿಲ್ಡಾ ರಾಯಪ್ಪನ್ ರವರನ್ನು ಕರಾವಳಿ ಗೌರವ ಪ್ರಶಸ್ತಿ ಸಮಿತಿಯು ಆಯ್ಕೆ ಮಾಡಲಾಗಿರುತ್ತದೆ.

ವೃತ್ತಿ ಬದುಕಿನಲ್ಲಿ ತನ್ನತನಕ್ಕೆ ಮಾತ್ರ ಸೀಮಿತವಾಗಿರದೇ ಪ್ರೊ. ಹಿಲ್ಡಾ ರಾಯಪ್ಪನ್ ರವರ ಕಂಡದ್ದು ಸಮಾಜದ ಬಡತನ, ನೋವು, ವೇದನೆಗಳ ಒಳ ಆಯಾಮಗಳನ್ನು. ಆ ಮೂಲಕ ಸಮಾಜಸೇವೆಯ ತನ್ನೊಳಗಿನ ಅಂತರಂಗದ ಒಡಲನ್ನು ಕಡಲನ್ನಾಗಿ ಹರಿಯ ಬಿಟ್ಟಿದ್ದಾರೆ. ಇದರ ಪರಿಣಾಮವಾಗಿ 1987 ರಲ್ಲಿ ಕೌನ್ಸಿಲಿಂಗ್ ಸೇವಾ ಕಾರ್ಯಕ್ಕೆ ಸಾಂಸ್ಥಿಕ ರೂಪು ನೀಡಿ ಆರಂಭವಾದದ್ದೇ ಇವರ “ಪ್ರಜ್ಞಾ ಸಲಹಾ ಕೇಂದ್ರ”. ಇದು ಮಂಗಳೂರಿನ ಪ್ರಪ್ರಥಮ ಕೌಟುಂಬಿಕ ಸಲಹಾ ಕೇಂದ್ರವಾಗಿದೆ. ಎಲ್ಲಾ ವರ್ಗದ ಜನರ ಕೌಟುಂಬಿಕ, ಮಾನಸಿಕ ಸಮಸ್ಯೆಗಳಿಗೆ ಪರಿಹಾರ ನೀಡಿ, ಮುದುಡಿದ ಮನಸ್ಸುಗಳನ್ನು ಅರಳಿಸಲು, ಒಡೆದ ಮನಸ್ಸುಗಳನ್ನು ಬೆಸೆಯಲು ಆಪ್ತ ಸಮಾಲೋಚನೆಯನ್ನು ಪರಿಹಾರ ತಂತ್ರವಾಗಿ ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತಂದು ಕಾರ್ಯ ಸಾಧಿಸಿರುತ್ತಾರೆ.

ಮಕ್ಕಳಿಗಾಗಿ ನಿರ್ಗತಿಕ ಮಕ್ಕಳ ಕುಟೀರ, ಬಾಲ ಕಾರ್ಮಿಕ ಮಕ್ಕಳ ರಕ್ಷಣೆ ಮತ್ತು ಶಿಕ್ಷಣ, ಚಿಣ್ಣರ ತಂಗುದಾಣ, ಮಕ್ಕಳ ನಿಧಿ ಮುಂತಾದ ಚಟುವಟಿಕೆಗಳಿಂದ ನೊಂದ ಮಕ್ಕಳಿಗೆ ಆಶ್ರಯ ನೀಡಿರುತ್ತಾರೆ. ಮಹಿಳೆಯರನ್ನು ಕೇಂದ್ರೀಕರಿಸಿ ಅಲ್ಪಾವಧಿ ವಸತಿ ಗೃಹ, ಸ್ವಾಧಾರ ಗೃಹ, ಸಾಂತ್ವನ ಮಹಿಳಾ ಸಹಾಯವಾಣಿ, ಮಹಿಳಾ ಸ್ವಸಹಾಯ ಗುಂಪುಗಳು ಮೊದಲಾದವುಗಳನ್ನು ಸ್ಥಾಪಿಸಿ ಶೋಷಿತ ಮಹಿಳೆಯರ ಬದುಕಿಗೆ ಆಸರೆಯಾಗಿರುತ್ತಾರೆ. ಪುರುಷರನ್ನು ಕೇಂಧ್ರೀಕರಿಸಿ ಅಮಲು ವ್ಯಸನಿಗಳ ಸಮಗ್ರ ಪುನರ್ವಸತಿ ಕೇಂದ್ರ ಸ್ಥಾಪಿಸಿದರು. ಇಂತಹ ಹಲವಾರು ಯೋಜನೆಗಳಿಂದ ಪ್ರಜ್ಞಾ ಸಲಹಾ ಕೇಂದ್ರವು ಅನೇಕ ಕುಟುಂಬಗಳ ಬದುಕಿಗೆ ಬೆಳಕು ನೀಡುತ್ತಾ ಸಮಾಜಕ್ಕೊಂದು ಮಾದರಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ 125ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅತ್ಯುತ್ತಮ ವಿದ್ಯಾರ್ಥಿ ಎಂಬ ಪುರಸ್ಕಾರ – 1996, ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾಜ ಸೇವೆಗಾಗಿ ಗೌರವ – 1997, ಟ್ರೈನಿಂಗ್ ಸೆಂಟರ್ ನಿಂದ ಸಮಾಜ ಸೇವೆಗಾಗಿ ಗೌರವ – 1998, ಸೈಂಟ್ ಆಗ್ನೇಸ್ ಮಹಿಳಾ ಕಾಲೇಜಿನಲ್ಲಿ ಮಹಿಳೆಯರ ಸಬಲೀಕರಣ ಮತ್ತು ಅಭಿವೃದ್ಧಿಗಾಗಿ ಸನ್ಮಾನ – 2000, ರೋಟರಿ ಕ್ಲಬ್ ಮಂಗಳೂರು ಇವರಿಂದ ಸಮಾಜಕ್ಕೆ ಅಮೂಲ್ಯ ಸೇವೆ ನೀಡಿದ್ದಕ್ಕಾಗಿ ಗೌರವ – 2002, ರೋಶನಿ ನಿಲಯ ಹಳೆ ವಿದ್ಯಾರ್ಥಿ ಸಂಘದಿಂದ ಸಮಾಜ ಸೇವಾ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ್ದಕ್ಕಾಗಿ ಗೌರವ – 2007, ರಚನಾ ಫೌಂಡೇಶನ್ ಸಂಸ್ಥೆಯ ವತಿಯಿಂದ ಸಮಾಜಕ್ಕೆ ವಿಶಿಷ್ಟ ಸೇವೆ ಸಲ್ಲಿಸಿದ್ದಕ್ಕಾಗಿ ಪ್ರಶಸ್ತಿ – 2012 ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ಗೌರವ ಪುರಸ್ಕಾರಗಳನ್ನು ಪ್ರೊ. ಹಿಲ್ಡಾ ರಾಯಪ್ಪನ್ ರು ಹಾಗೂ ಪ್ರಜ್ಞಾ ಸಲಹಾ ಕೇಂದ್ರ ಪಡೆದು ಹಲವಾರು ಆಯಾಮಗಳಲ್ಲಿ ನಾಡಿನ ಏಳಿಗೆಗಾಗಿ ಅಪಾರ ಶ್ರಮವಹಿಸುತ್ತಿರುತ್ತಾರೆ. ಈ ನಿಟ್ಟಿನಲ್ಲಿ 2018ರ ಡಿಸೆಂಬರ್ 30 ರಂದು ಸಂಜೆ 5.30 ಗಂಟೆಗೆ ಪಣಂಬೂರು ಕಡಲ ಕಿನಾರೆಯಲ್ಲಿ ನಡೆಯುವ ಕರಾವಳಿ ಉತ್ಸವ 2018-19 ನೇ ಸಾಲಿನ ಸಮಾರೋಪ ಸಮಾರಂಭದಲ್ಲಿ ಪ್ರೊ. ಹೀಲ್ಡಾ ರಾಯಪ್ಪನ್ ರವರ ಸಮಾಜ ಸೇವೆ, ಶಿಕ್ಷಣ, ಮಹಿಳಾ ಸಬಲೀಕರಣ ಮುಂತಾದ ಕ್ಷೇತ್ರಗಳಲ್ಲಿನ ಸಾಧನೆಗಳನ್ನು ಗುರುತಿಸಿ 2018-19 ನೇ ಸಾಲಿನ ಪ್ರತಿಷ್ಠಿತ “ಕರಾವಳಿ ಗೌರವ ಪ್ರಶಸ್ತಿ-2018” ಪ್ರಧಾನ ಮಾಡಲು ನಿರ್ಧರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.


Spread the love