ಕರಾವಳಿ ಪ್ರಾಧಿಕಾರದ ಕಾಮಗಾರಿ ತ್ವರಿತಗೊಳಿಸಿ -ಶಾಲಿನಿ ರಜನೀಶ್ 

Spread the love

ಕರಾವಳಿ ಪ್ರಾಧಿಕಾರದ ಕಾಮಗಾರಿ ತ್ವರಿತಗೊಳಿಸಿ -ಶಾಲಿನಿ ರಜನೀಶ್ 

ಮಂಗಳೂರು : ಕರಾವಳಿ ಭಾಗದಲ್ಲಿ ಅಭಿವೃದ್ಧಿ ಹೊಂದದೆ ಬಾಕಿ ಉಳಿದಿರುವ ಎಲ್ಲಾ ಕಾಮಗಾರಿ ಪ್ರಕ್ರಿಯೆಗಳು ಮಾರ್ಚ್ ತಿಂಗಳೊಳಗೆ ಪೂರ್ಣಗೊಳ್ಳಬೇಕು ಎಂದು ಯೋಜನೆ ಮತ್ತು ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷೆ ಶಾಲಿನಿ ರಜನೀಶ್ ಸೂಚನೆ ನೀಡಿದರು.

ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಅವರು, ಮಾರ್ಗಸೂಚಿ ಪ್ರಕಾರ ಗ್ರಾಮದವರು ಅಥವಾ ಶಾಸಕರು ಅಭಿವೃದ್ಧಿ ಕಾರ್ಯಗಳಿಗೆ ಶೇಕಡಾ 10 ರಷ್ಟು ವೆಚ್ಚ ಬರಿಸಿದಾಗ ಉಳಿದ ಶೇಕಡಾ 90 ರಷ್ಟು ವೆಚ್ಚವನ್ನು ಪ್ರಾಧಿಕಾರದ ವತಿಯಿಂದ ನೀಡಿ ಕಾಮಗಾರಿಗಳನ್ನು ಪೂರ್ಣಗೊಳಿಸಬಹುದು. ಸಂಪೂರ್ಣಗೊಂಡ ಕಾಮಗಾರಿಗಳ ವರದಿ ಹಾಗೂ ಛಾಯಾಚಿತ್ರಗಳನ್ನು ಪ್ರಾಧಿಕಾರದ ವೆಬ್‍ಸೈಟ್‍ಗೆ ಕಡ್ಡಾಯವಾಗಿ ಅಪ್‍ಲೋಡ್ ಮಾಡಬೇಕು ಎಂದು ಹೇಳಿದರು.

ಇತರೆ ಜಿಲ್ಲೆಗಳನ್ನು ಹೋಲಿಸಿದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದುವರೆದಿದೆ. ಜಿಲ್ಲೆಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಕೈಗಾರಿಕಾ ಕ್ಷೇತ್ರಗಳಲ್ಲಿ ಹೊಸ ಚಿಂತನೆಗಳೊಂದಿಗೆ ಮುಂದುವರಿದಾಗ ಜಿಲ್ಲೆ ಸಮಗ್ರ ಅಭಿವೃದ್ಧಿಯಾಗುತ್ತದೆ. ಅಭಿವೃದ್ಧಿ ಕಾಮಗಾರಿಗಳಿಗೆ ವೆಚ್ಚ ಭರಿಸುವುದು ಮುಖ್ಯವಾಗುವುದಿಲ್ಲ, ಅದರಿಂದ ಸಾರ್ವಜನಿಕರಿಗೆ ಎಷ್ಟರ ಮಟ್ಟಿಗೆ ಪ್ರಯೋಜನವಾಗುತ್ತದೆ ಎಂಬುದು ಮುಖ್ಯ. ಕಾಮಗಾರಿ ವಿಳಂಬವಾಗದಂತೆ ಉತ್ತಮ ಗುಣಮಟ್ಟದೊಂದಿಗೆ ಆದಷ್ಟು ವೇಗದಲ್ಲಿ ಜನರಿಗೆ ಉಪಯೋಗವಾಗುವಂತೆ ಸೌಲಭ್ಯವನ್ನು ಒದಗಿಸುವಲ್ಲಿ ಕಾರ್ಯ ನಿರತರಾಗಿರಬೇಕು ಎಂದು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಬಾಕಿ ಉಳಿದಿರುವ ಮೀನು ಮಾರುಕಟ್ಟೆಯ ಕಾಮಗಾರಿ ಪ್ರಕ್ರಿಯೆಯನ್ನು ಒಂದು ವಾರದೊಳಗೆ ಅನುಮೋದನೆಗೆ ಒಳಪಡಿಸಿ ಕಾಮಗಾರಿ ಮರು ಪ್ರಾರಂಭಗೊಳಿಸುವಂತೆ ಆದೇಶ ನೀಡಲಾಯಿತು. ಕರಾವಳಿ ಪ್ರದೇಶದಲ್ಲಿ ಕಂಡು ಬರುವ ಅಭಿವೃದ್ಧಿ ಕೊರತೆಗಳನ್ನು ಪಟ್ಟಿ ಮಾಡಿ ಪ್ರಾಧಿಕಾರದ ಗಮನಕ್ಕೆ ನೀಡಬೇಕು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಸುಸ್ಥಿರ ಅಭಿವೃದ್ಧಿ ಗುರಿಗಳಾದ ಮೀನುಗಾರಿಕೆ ಮತ್ತು ಪ್ರವಸೋಧ್ಯಮದಲ್ಲಿ ಬಾಕಿ ಇರುವ ಕಾಮಗಾರಿ ವಿವರಗಳ ಬೇಡಿಕೆಯನ್ನು ಸರ್ಕಾರದ ಮುಂದಿಡಲಾಗುವುದು ಎಂದು ಶಾಲಿನಿ ರಜನೀಶ್ ಭರವಸೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿ’ಸೋಜ, ಪುತ್ತೂರು ವಿಭಾಗ ಸಹಾಯಕ ಆಯುಕ್ತ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.


Spread the love