ಕರ್ನಾಟಕ ಬಂದ್ ಗೆ ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಗೆ ಬೆರಳೆಣಿಕೆಯ ಜನ ಭಾಗಿ

Spread the love

ಕರ್ನಾಟಕ ಬಂದ್ ಗೆ ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಗೆ ಬೆರಳೆಣಿಕೆಯ ಜನ ಭಾಗಿ

ಉಡುಪಿ: ರೈತರ ಸಾಲಮನ್ನಾಕ್ಕೆ ಆಗ್ರಹಿಸಿ ಸೋಮವಾರ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ಗೆ ಉಡುಪಿ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜಿಲ್ಲೆಯಾದ್ಯಂತ ಜನಜೀವನ ಎಂದಿನಂತೆ ನಡೆಯುತ್ತಿದ್ದು, ಸಾರಿಗೆ ಸಂಚಾರ, ಅಂಗಡಿ ಮುಂಗಟ್ಟುಗಳ ವ್ಯವಹಾರಕ್ಕೆ ಯಾವುದೇ ತೊಂದರೆಯಾಗಿಲ್ಲ.

ಜಿಲ್ಲಾ ಬಿಜೆಪಿಯ ವತಿಯಿಂದ ನಗರದ ಜೋಡುಕಟ್ಟೆಯ ಬಳಿ ಆಯೋಜಿಸಿದ ಪ್ರತಿಭಟನೆಗೆ ಕೂಡ ಸಾಕಷ್ಟು ಜನ ಸೇರದೆ ನೀರಸವಾದ ಪ್ರತಿಕ್ರಿಯೆ ವ್ಯಕ್ತವಾಯಿತು. ಕೇವಲ ಬೆರಳೆಣಿಕಯ ಜನರೊಂದಿಗೆ ಜೋಡುಕಟ್ಟೆಯಿಂದ ಸರ್ವಿಸ್ ಬಸ್ ಸ್ಟ್ಯಾಂಡ್ ವರೆಗೆ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಮೆರವಣಿಗೆ ನಡೆಸಿದರು. ಜಿಲ್ಲೆಯಲ್ಲಿ ಐದು ಸ್ಥಾನಗಳನ್ನು ಗೆದ್ದ ಬಿಜೆಪಿ ಜಿಲ್ಲೆಯಲ್ಲಿ ಬಂದ್ ಗೆ ಬೆಂಬಲ ನೀಡಿ ಅದನ್ನು ಯಶಸ್ವಿಗೊಳಿಸುವಲ್ಲಿ ವಿಫಲವಾಗಿದೆ.

ಈ ವೇಳೆ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಅವರು ಪ್ರಣಾಳಿಕೆಯಲ್ಲಿ ರೈತರ ಸಾಲಮನ್ನಾದ ಭರವಸೆ ನೀಡಿದ್ದ ಜೆಡಿಎಸ್ ಅಧಿಕಾರಕ್ಕೆ ಬಂದ ಬಳಿಕ ಉಲ್ಟಾ ಹೊಡೆಯುತ್ತಿದೆ. ಕೊಟ್ಟ ಭರವಸೆಯನ್ನು ಕುಮಾರಸ್ವಾಮಿ ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.


Spread the love