ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ದೂರ ಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರವಾಗಿ ಆಳ್ವಾಸ್ ಆಯ್ಕೆ

Spread the love

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ದೂರ ಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರವಾಗಿ ಆಳ್ವಾಸ್ ಆಯ್ಕೆ

ಮೂಡುಬಿದಿರೆ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಧೈಯೋದ್ದೇಶಕ್ಕೆ ಅನುಗುಣವಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕಲಿಕಾರ್ಥಿ ಸಹಾಯ ಕೇಂದ್ರವಾಗಿ ಆಯ್ಕೆಯಾಗಿದೆ.

ವಿಶ್ವವಿದ್ಯಾಲಯದ ಕುಲಪತಿ ಹಾಗೂ ವ್ಯವಸ್ಥಾಪನಾ ಮಂಡಳಿ ಅನುಮೋದನೆ ಮತ್ತು ತಜ್ಞರ ಪರಿಶೀಲನಾ ಸಮಿತಿಯ ಶಿಫಾರಸ್ಸಿನ ಮೇರೆಗೆ 2020-21ನೇ ಸಾಲಿನ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳನ್ನು ನಿರ್ವಹಿಸುವ ಸಂಬಂಧ ಆಗಸ್ಟ್ 25ರಿಂದ ಜಾರಿಗೆ ಬರುವಂತೆ ಆಳ್ವಾಸ್ ಕಾಲೇಜ್ ಅನ್ನು ಕರಾಮುವಿ ಕಲಿಕಾರ್ಥಿ ಸಹಾಯ ಕೇಂದ್ರವನ್ನಾಗಿ ಸ್ಥಾಪಿಸಿ ಆದೇಶಿಸಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದ್ದಾರೆ.

ಆಳ್ವಾಸ್‍ನಲ್ಲಿ ಸ್ಥಾಪನೆಯಾಗಿರುವ ಕಲಿಕಾರ್ಥಿ ಸಹಾಯಕೇಂದ್ರದಲ್ಲಿ ಬಿ.ಎ., ಬಿ.ಕಾಮ್, ಎಂ.ಕಾಮ್, ಎಂ.ಎ., ಎಂ.ಎಸ್ಸಿ, ಬ್ಯಾಚ್ಯುಲರ್ ಆಫ್ ಲೈಬ್ರರಿ ಸೈನ್ಸ್, ಮಾಸ್ಟರ್ ಆಫ್ ಲೈಬ್ರರಿ ಸೈನ್ಸ್ ಮುಂತಾದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳ ಜೊತೆಗೆ ವಿಶೇಷವಾಗಿ ಬಿ.ಎಡ್ ಮತ್ತು ಎಂ.ಬಿ.ಎ., ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಕೋರ್ಸ್‍ಗಳಿಗೆ ಅವಕಾಶ ನೀಡಲಾಗಿದೆ. ಇದಕ್ಕೆ ಪೂರಕವಾಗಿ ಆಳ್ವಾಸ್‍ನಲ್ಲಿ ಸುಸಜ್ಜಿತ ಗ್ರಂಥಾಲಯ, ಪ್ರಯೋಗಾಲಯಗಳು, ಮಲ್ಟಿಮೀಡಿಯಾ ಸೆಂಟರ್ ಹಾಗೂ ಅನುಭವಿ ಪ್ರಾಧ್ಯಾಪಕ ವೃಂದವಿದೆ. ವಿದ್ಯಾರ್ಥಿಗಳ ಸಹಾಯಕ್ಕಾಗಿ ಹೆಲ್ಪ್ ಡೆಸ್ಕ್ ಸೇವೆ ಕೂಡ ಇದೆ.

ಪ್ರವೇಶಾತಿಗಳು ಈಗಾಗಲೇ ಆರಂಭವಾಗಿದ್ದು, ಆಕಾಂಕ್ಷಿಗಳು ದಾಖಲಾತಿ ಆಳ್ವಾಸ್ ಕಾಲೇಜಿನ ದೂರ ಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ. ಈ ಶೈಕ್ಷಣಿಕ ವರ್ಷದಲ್ಲಿ ಆಳ್ವಾಸ್ ಕಲಿಕಾರ್ಥಿ ಸಹಾಯಕೇಂದ್ರದಲ್ಲಿ 500 ವಿದ್ಯಾರ್ಥಿಗಳು ದಾಖಲಾತಿ ಮಾಡಿಕೊಳ್ಳಬಹುದಾದ ನಿರೀಕ್ಷೆಯಿದೆ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ವತಿಯಿಂದ ಬಿಪಿಎಲ್ ಪಡಿತರ ಕಾರ್ಡ್ ಹೊಂದಿರುವ ಮಹಿಳಾ ಕಲಿಕಾರ್ಥಿಗಳಿಗೆ ಟ್ಯೂಶನ್ ಫೀಯಲ್ಲಿ ಶೇ.25 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಪ್ರವೇಶಾತಿ ಬಯಸುವ ಎಸ್.ಸಿ/ ಎಸ್.ಟಿ. ಅಭ್ಯರ್ಥಿಗಳು ಸಮಾಜ ಕಲ್ಯಾಣ ಇಲಾಖೆಯಿಂದ ಶುಲ್ಕ ಮರು ಭರಿಕೆ ಪಡೆಯಲು ಅರ್ಹರಾಗಿರುತ್ತಾರೆ. ವಿವಿಧ ಶಿಕ್ಷಣ ಕ್ರಮಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗುವುದು.

ಈ ಕಲಿಕಾರ್ಥಿ ಸಹಾಯ ಕೇಂದ್ರದಿಂದಾಗಿ ಉದ್ಯೋಗದಲ್ಲಿರುವ ಶಿಕ್ಷಣ ಆಕಾಂಕ್ಷಿಗಳಿಗೆ, ಶಿಕ್ಷಣ ವಂಚಿತರಿಗೆ ಹಾಗೂ ವಿದ್ಯಾರ್ಥಿ ಸಮುದಾಯಕ್ಕೆ ಸಹಾಯವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್- 7090715010, ಸ್ಥಿರ ದೂರವಾಣಿ 08258-261274 ಸಂಪರ್ಕಿಸಬಹುದು ಎಂದು ಡಾ.ಎಂ ಮೋಹನ ಆಳ್ವ ತಿಳಿಸಿದ್ದಾರೆ.

ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಕಲಿಕಾರ್ಥಿ ಸಹಾಯ ಕೇಂದ್ರದ ಸಂಯೋಜಕ ಬಾಲಕೃಷ್ಣ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


Spread the love