ಕಲ್ಲಡ್ಕ ಯುವಕನಿಗೆ ಚೂರಿ ಇರಿತ; ಬಂಟ್ವಾಳ ತಾಲ್ಲೂಕಿನಾದ್ಯಂತ ಜೂ 2ರವರೆಗೆ ನಿಷೇಧಾಜ್ಞೆ ಜಾರಿ

Spread the love

ಕಲ್ಲಡ್ಕ ಯುವಕನಿಗೆ ಚೂರಿ ಇರಿತ; ಬಂಟ್ವಾಳ ತಾಲ್ಲೂಕಿನಾದ್ಯಂತ ಜೂ 2ರವರೆಗೆ ನಿಷೇಧಾಜ್ಞೆ ಜಾರಿ

ಮಂಗಳೂರು: ಕಲ್ಲಡ್ಕದಲ್ಲಿ ಶುಕ್ರವಾರ ಮಧ್ಯಾಹ್ನ ಯುವಕನಿಗೆ ಚೂರಿ ಇರಿತ ಪ್ರಕರಣದಿಂದ ಪರಿಸ್ಥಿತಿ ಬಿಗಿಯಡಗಿರುವ ಕಾರಣದಿಂದ ಬಂಟ್ವಾಳ ತಾಲ್ಲೂಕಿನಾದ್ಯಂತ ಶನಿವಾರ ಬೆಳಿಗ್ಗೆ 9ರಿಂದ ಜೂನ್ 2ರ ಸಂಜೆ 6ರವರೆಗೆ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಗಳು ಕಲ್ಲಡ್ಕದಲ್ಕಿ ಮೊಕ್ಕಾಂ ಹೂಡಿದ್ದು ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳಾದ ಮಿಥುನ್‌, ಯತಿನ್ ಮತ್ತು ಅಮಿತ್ ಪತ್ತೆಗೆ ಶೋಧ ಮುಂದುವರಿದಿದೆ.

ಘಟನೆ ವಿವರ: ಕಲ್ಲಡ್ಕ ಪಟ್ಟಣದಲ್ಲಿ ಶುಕ್ರವಾರ ಮಧ್ಯಾಹ್ನ ಜುಮಾ ನಮಾಝ್ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ಮೂವರು ಮುಸ್ಲಿಂ ಯುವಕರ ಮೇಲೆ ಮೂವರು ಹಿಂದೂ ಯುವಕರು ಹಲ್ಲೆ ನಡೆಸಿ, ಒಬ್ಬನಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದರು.

ಕಲ್ಲಡ್ಕ ನಿವಾಸಿ ಮುಹಮ್ಮದ್ ಆಶಿರ್ (21) ಚೂರಿ ಇರಿತಕ್ಕೊಳಗಾಗಿದ್ದು, ಈತನ ಜತೆಗಿದ್ದ ಜಮೀಲ್ (21) ಮತ್ತು ನಾಸಿರ್‌ (18) ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದೆ.

ಮೂವರೂ ಕಲ್ಲಡ್ಕದ ಮಸೀದಿಯೊಂದರಲ್ಲಿ ಮಧ್ಯಾಹ್ನ ನಮಾಝ್ ಮುಗಿಸಿ 1.30ರ ಸುಮಾರಿಗೆ ಮನೆಗೆ ಮರಳುತ್ತಿದ್ದರು. ಆಗ ಅವರನ್ನು ಕಾರಿನಲ್ಲಿ ಹಿಂಬಾಲಿಸಿ ಬಂದ ಯುವಕರ ತಂಡ ಹಲ್ಲೆ ನಡೆಸಿ, ಚೂರಿಯಿಂದ ಇರಿದಿದೆ. ಹಾಶಿರ್‌ನ ಎಡ ಭುಜಕ್ಕೆ ಗಾಯವಾಗಿದ್ದು, ತುಂಬೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಕೊಲೆ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದು, ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಕಲ್ಲಡ್ಕದ ಮಿಥುನ್‌, ಆತನ ಸಹಚರರಾದ ಯತಿನ್‌ ಮತ್ತು ಅಮಿತ್‌ ಕೃತ್ಯ ಎಸಗಿದ್ದಾರೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ. ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿರುವ ಪೊಲೀಸರು, ಹಲವು ತಂಡಗಳಲ್ಲಿ ಶೋಧ ನಡೆಸುತ್ತಿದ್ದಾರೆ.

ಪ್ರಜಾವಾಣಿ ವಾರ್ತೆ


Spread the love