ಕಳವು ವೇಳೆ ಸಹಚರನ ಸಾವು ಪ್ರಕರಣಕ್ಕೆ ತಿರುವು: ಪ್ರಮುಖ ಆರೋಪಿ ಬಂಧನ, 550 ಕೆಜಿ ಅಲ್ಯೂಮಿನಿಯಂ ವೈರ್ ವಶ
ಬೆಳ್ತಂಗಡಿ: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣವಾಗಿ ದಾಖಲಾಗಿದ್ದ ಮುಶ್ತಕ್ ಸಾವಿನ ಪ್ರಕರಣದ ತನಿಖೆ ವೇಳೆ ಕಳವು ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜುಲೈ 1ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 35/2026ರಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದಾಗ, ಮೃತ ಮುಶ್ತಕ್ ಮೃತಪಟ್ಟ ಸ್ಥಳದಲ್ಲಿ ಕಳವು ನಡೆದಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅಪರಾಧ ಸಂಖ್ಯೆ 73/2026ರಡಿ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್)-2023ರ ಕಲಂ 331(4), 305 ಹಾಗೂ 3(5)ರಡಿ ಹೊಸದಾಗಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಯಿತು.
ತನಿಖೆಯ ವೇಳೆ ಬೆಳ್ತಂಗಡಿ ತಾಲೂಕಿನ ಕಾಶಿಪಟ್ನ ನಿವಾಸಿ ಪಿ. ಇಬ್ರಾಹಿಂ ಲತೀಫ್ (36) ಎಂಬಾತನನ್ನು ಜುಲೈ 14ರಂದು ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿ ನೀಡಿದ ಮಾಹಿತಿಯಂತೆ, ಜೂನ್ 30ರ ರಾತ್ರಿ ಇಬ್ರಾಹಿಂ ಲತೀಫ್, ಮೃತ ಮುಶ್ತಕ್ ಹಾಗೂ ಮತ್ತೋರ್ವ ಆರೋಪಿಯೊಂದಿಗೆ ಸೇರಿ ಬೆಳ್ತಂಗಡಿ ಕುವೆಟ್ಟು ಶಕ್ತಿನಗರದಲ್ಲಿರುವ ಖಾಸಗಿ ಸಂಸ್ಥೆಯ ಆವರಣದಿಂದ ಅಲ್ಯೂಮಿನಿಯಂ ಹಾಗೂ ಕಬ್ಬಿಣದ ಸಾಮಗ್ರಿಗಳನ್ನು ಕಳವು ಮಾಡುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಮುಶ್ತಕ್ನ ಕುತ್ತಿಗೆಗೆ ಕಬ್ಬಿಣದ ತಂತಿ ಸಿಲುಕಿ ಆತ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ಆರೋಪಿಯಿಂದ ಕಳವು ಮಾಡಲಾಗಿದ್ದ ಸುಮಾರು 550 ಕೆಜಿ ಅಲ್ಯೂಮಿನಿಯಂ ವೈರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದೇ ವೇಳೆ ಆರೋಪಿಯ ವಿರುದ್ಧದ ಹಿನ್ನೆಲೆಯನ್ನು ಪರಿಶೀಲಿಸಿದಾಗ, ವೇಣೂರು, ಉಪ್ಪಿನಂಗಡಿ, ಅರೆಹಳ್ಳಿ ಹಾಗೂ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸೇರಿದಂತೆ ಒಟ್ಟು 16 ಕಳವು ಪ್ರಕರಣಗಳಲ್ಲಿ ಈತ ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ.
ಪೊಲೀಸರು ಪ್ರಕರಣದ ಮುಂದಿನ ತನಿಖೆಯನ್ನು ಮುಂದುವರಿಸಿದ್ದಾರೆ.













