ಕಾಂಗ್ರೆಸಿನ ಚುನಾವಣಾ ಪ್ರಚಾರ ಪಾದಯಾತ್ರೆಗೆ ಅನುಮತಿ ನಿರಾಕರಣೆ – ಜಿಲ್ಲಾಧಿಕಾರಿಗೆ ಮನವಿ

Spread the love

ಕಾಂಗ್ರೆಸಿನ ಚುನಾವಣಾ ಪ್ರಚಾರ ಪಾದಯಾತ್ರೆಗೆ ಅನುಮತಿ ನಿರಾಕರಣೆ – ಜಿಲ್ಲಾಧಿಕಾರಿಗೆ ಮನವಿ

ಉಡುಪಿ: ಕಾಂಗ್ರೆಸ್ ಪಕ್ಷದ ವತಿಯಿಂದ ಎ.16ರಂದು ಹಮ್ಮಿಕೊಳ್ಳ ಲಾದ ಪಾದಯಾತ್ರೆಗೆ ಅನುಮತಿ ನಿರಾಕರಿಸಿರುವುದನ್ನು ವಿರೋಧಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸೋಮವಾರ ಉಡುಪಿ ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಅವರಿಗೆ ಮನವಿ ಸಲ್ಲಿಸಲಾಯಿತು.

ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿಯ ಚುನಾವಣಾ ಪ್ರಚಾರಕ್ಕಾಗಿ ಮಲ್ಪೆಯಿಂದ ಕಲ್ಸಂಕದವರೆಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲು ಕ್ಷೇತ್ರ ಸಹಾಯಕ ಚುನಾವಣಾಧಿಕಾರಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಚುನಾವಣಾಧಿಕಾರಿಗಳು ಈ ಮಾರ್ಗ ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಪಾದಯಾತ್ರೆಗೆ ಅನುಮತಿ ನೀಡಲಾಗುವುದಿಲ್ಲ ಎಂದು ಮೌಖಿಕ ಆದೇಶ ನೀಡುವುದರೊಂದಿಗೆ ನಮ್ಮ ಅರ್ಜಿಯನ್ನು ವಾಪಾಸ್ಸು ನೀಡಿದ್ದರು.

ಈ ಮಾರ್ಗದಲ್ಲಿ ಈವರೆಗೆ ಯಾವುದೇ ಪಕ್ಷದ ಕಾರ್ಯಕ್ರಮಕ್ಕೆ ಪರವಾನಿಗೆ ನೀಡಿಲ್ಲ ಎಂದು ತಿಳಿಸಿದ್ದರು. ಯಾವುದೇ ಸಾರ್ವಜನಿಕ ಕಾರ್ಯಕ್ರಮಕ್ಕೆ 48 ಗಂಟೆ ಮೊದಲೇ ಅನುಮತಿ ಪಡೆದುಕೊಳ್ಳಬೇಕೆಂದು ಅಭ್ಯರ್ಥಿಯ ಕೈ ಪುಸ್ತಕ ದಲ್ಲಿ ಪ್ರಕಟಿಸಲಾಗಿದೆ. ಆದರೆ ಬಿಜೆಪಿ ಎ.15ರಂದು ಕಲ್ಮಾಡಿಯಿಂದ ವಡ ಬಾಂಡೇಶ್ವರ ರಸ್ತೆಯಲ್ಲಿ ಮಾಡಿರುವ ಪಾದಯಾತ್ರೆಗೆ ಯಾವ ದಿನಾಂಕದಂದು ಅರ್ಜಿ ಪಡೆದು ಯಾವ ದಿನ ಪರವಾನಿಗೆ ನೀಡಲಾಗಿದೆ. ಅಲ್ಲದೆ ಯಾವ ಕಾನೂನಿನಡಿಯಲ್ಲಿ ನಮ್ಮ ಅರ್ಜಿಯನ್ನು ತಿರಸ್ಕರಿಸುವ ಹಾಗೂ ಬಿಜೆಪಿಯ ಅರ್ಜಿಯನ್ನು ಪುರಸ್ಕರಿಸುವ ಕಲಂ ಇರುತ್ತದೆ ಎಂಬುದರ ಬಗ್ಗೆ ಸ್ಪಷ್ಟೀಕರಣ ನೀಡಬೇಕಾಗುತ್ತದೆ ಎಂದು ಕಾಂಗ್ರೆಸ್ ಮನವಿಯಲ್ಲಿ ಒತ್ತಾಯಿಸಲಾಗಿದೆ.

ತಾವು ತಮ್ಮ ವಿಶೇಷಾಧಿಕಾರಿವನ್ನು ನಿಷ್ಪಕ್ಷಪಾತವಾಗಿ ಚಲಾಯಿಸಬೇಕು. ಬಿಜೆಪಿಗೆ ನೀಡಿದ ಪರವಾನಿಗೆ ಕಾನೂನು ಬಾಹಿರವಾಗಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ಅಧಿಕಾರಿ ಅಥವಾ ಪಕ್ಷದವರು ತಪ್ಪು ಕೆಲಸ ಮಾಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ ಎಂಬುದನ್ನು ಪರಿಗಣಿಸಬೇಕು ಎಂದು ಕಾಂಗ್ರೆಸ್ ಮನವಿ ಯಲ್ಲಿ ತಿಳಿಸಿದೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ್ ಪುತ್ರನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ಕೇಶವ ಎಂ.ಕೋಟ್ಯಾನ್, ಹರೀಶ್ ಶೆಟ್ಟಿ, ವಿಶ್ವಾಸ್ ಅಮೀನ್, ಕಿಶನ್ ಹೆಗ್ಡೆ ಕೊಳ್ಕೆಬೈಲು, ದಿವಾಕರ್ ಕುಂದರ್, ಹಬೀಬ್ ಅಲಿ, ಮಹಾಬಲ ಕುಂದರ್, ಪ್ರಶಾಂತ್ ಪೂಜಾರಿ, ಹರೀಶ್ ಪೂಜಾರಿ, ಜನಾರ್ದನ ಭಂಡಾರ್‌ಕರ್, ಶೇಖರ್ ಕೋಟ್ಯಾನ್, ವಸಂತ ಉಪಸ್ಥಿತರಿದ್ದರು.


Spread the love