ಕಾಂಗ್ರೆಸ್-ಜೆಡಿಎಸ್ ಹಣ, ಹೆಂಡ ಹಂಚಿ ಉಪಚುನಾವಣೆ ಗೆದ್ದಿದೆ – ಯಡ್ಯೂರಪ್ಪ

Spread the love

ಕಾಂಗ್ರೆಸ್-ಜೆಡಿಎಸ್ ಹಣ, ಹೆಂಡ ಹಂಚಿ ಉಪಚುನಾವಣೆ ಗೆದ್ದಿದೆ – ಯಡ್ಯೂರಪ್ಪ

ಶಿವಮೊಗ್ಗ: ಹಣ, ಹೆಂಡ ಹಂಚಿ ಕಾಂಗ್ರೆಸ್ ಪಕ್ಷ ಉಪಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದೆ ಎಂದು ಆರೋಪಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಬಳ್ಳಾರಿ, ಜಮಖಂಡಿ ಕ್ಷೇತ್ರದ ಫಲಿತಾಂಶ ನಮಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ತಿಳಿಸಿದ್ದಾರೆ.

ಮಂಗಳವಾರ ಪಂಚ ಕ್ಷೇತ್ರಗಳ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಮಂಡ್ಯದಲ್ಲಿ ಬಿಜೆಪಿಗೆ ಅಸ್ತಿತ್ವವೇ ಇರಲಿಲ್ಲವಾಗಿತ್ತು. ಆದರೆ ಈ ಬಾರಿ ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಅತೀ ಹೆಚ್ಚು ಮತಗಳಿಸಿದ್ದಾರೆ. ಬಳ್ಳಾರಿಯಲ್ಲಿಯೂ ನಮ್ಮ ಅಭ್ಯರ್ಥಿ ಜೆ.ಶಾಂತಾ ಕಲ್ಪನೆಗೂ ಮೀರಿ ಮತ ಪಡೆದಿದ್ದಾರೆ ಎಂದರು.

ಜಮಖಂಡಿ, ಬಳ್ಳಾರಿ, ರಾಮನಗರ, ಮಂಡ್ಯದಲ್ಲಿ ಹಣ, ಹೆಂಡದ ಹೊಳೆ ಹರಿಸಿರುವ ಕಾಂಗ್ರೆಸ್, ಜೆಡಿಎಸ್ ಗೆ ಶಿವಮೊಗ್ಗ ಕ್ಷೇತ್ರದಲ್ಲಿ ಅದು ಸಾಧ್ಯವಾಗಲಿಲ್ಲ. ಈ ಫಲಿತಾಂಶ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಅಲ್ಲ ಎಂದು ಹೇಳಿದರು.

ಆಡಳಿತಯಂತ್ರವನ್ನು ದುರುಪಯೋಗಪಡಿಸಿಕೊಂಡ ಸರ್ಕಾರ ಹಣ, ಹೆಂಡ ಹಂಚುವ ಮೂಲಕ ಗೆಲುವು ಸಾಧಿಸಿದ್ದು, ಮುಂದಿನ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಮತ್ತೆ ತನ್ನ ಶಕ್ತಿ ತೋರಿಸಲಿದೆ ಎಂದು ತಿಳಿಸಿದರು.

ಬಳ್ಳಾರಿ ಮತ್ತು ಜಮಖಂಡಿಯಲ್ಲಿ ನಾವು ಗೆದ್ದಿದ್ದರೆ ಸಮಾಧಾನವಿರುತ್ತಿತ್ತು. ಶಿವಮೊಗ್ಗದಲ್ಲಿ ಕೂಡ ಬಿಜೆಪಿ ಬಹಳಷ್ಟು ಅಂತರದಿಂದ ಗೆಲ್ಲುತ್ತೇವೆ ಎಂದು ನಿರೀಕ್ಷಿಸಿದ್ದೇವೆ. ಜೆಡಿಎಸ್ ಹಣ ಹೊಳೆ ಹರಿಸಿದ್ದು, ನಾವು ಅದರಲ್ಲಿ ಈಜಿಕೊಂಡು ದಡ ಸೇರಿದ್ದೇವೆ. 52500 ಅಂತರದಿಂದ ಶಿವಮೊಗ್ಗದಲ್ಲಿ ಬಿಜೆಪಿ ಗೆದ್ದಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿದ್ದರೂ ಕೂಡ ಇಷ್ಟು ಅಂತರ ಸಾಧಿಸಿದ್ದು ಒಂದು ಸಾಹಸವೇ. ಮಂಡ್ಯದಲ್ಲಿ ನಮ್ಮ ಅಭ್ಯರ್ಥಿ 2 ಲಕ್ಷ 44 ಸಾವಿರದಷ್ಟು ಮತಗಳನ್ನು ಪಡೆದದ್ದು ಸಮಾಧಾನ ತಂದಿದ್ದು ಮುಂದಿನ ದಿನಗಳಲ್ಲಿ ಆ ಭಾಗದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಲು ಇದು ಸಹಕಾರಿಯಾಗುತ್ತದೆ ಎಂದು ಯಡ್ಯೂರಪ್ಪ ಹೇಳಿದ್ದಾರೆ.


Spread the love