ಕಾಂತಾವರದಲ್ಲಿ ಮೊಯಿಲಿ ಅಭಿನಂದನೆ, ಮಹಾಕಾವ್ಯದ ಜೊತೆ ಅನುಸಂಧಾನ

Spread the love

ಮೂಡುಬಿದಿರೆ: ಅಲ್ಲಮಪ್ರಭು ಪೀಠ ಕಾಂತಾವರ ಇದರ ವತಿಯಿಂದ ಪ್ರತಿಷ್ಠಿತ ‘ಸರಸ್ವತಿ ಸಮ್ಮಾನ್’ ಪ್ರಶಸ್ತಿ ಪುರಸ್ಕøತ ಮಹಾಕವಿ ಡಾ. ಮೂಡಬಿದಿರೆ ವೀರಪ್ಪ ಮೊಯಿಲಿ ಅವರ ‘ಸಿರಿಮುಡಿ ಪರಿಕ್ರಮಣ’ ಮಹಾಕಾವ್ಯದ ಜೊತೆ ಅನುಸಂಧಾನ ಕುರಿತ ವಿಶಿಷ್ಠ ಕಾರ್ಯಕ್ರಮ ಕಾಂತಾವರ ಅಲ್ಲಮ ಪ್ರಭು ಪೀಠದ ಆವರಣದಲ್ಲಿನ ಚೌಟರ ಚೌಕಿಯಲ್ಲಿ ಎ1ರ ಅಪರಾಹ್ನ 3ರಿಂದ 6ರವರೆಗೆ ನಡೆಯಲಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಪ್ರಸಿದ್ಧ ಶಿಕ್ಷಣ ತಜ್ಞರು, ಚಿಂತಕರು, ಲೇಖಕ ಪ್ರೊ. ಕೆ.ಇ. ರಾಧಾಕೃಷ್ಣ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದೆ.

ಮಹಾಕಾವ್ಯದ ಜೊತೆ ಅನುಸಂಧಾನ ಕಾರ್ಯಕ್ರಮದಲ್ಲಿ ಭಗವದ್ಗೀತೆಯ ಚೌಕಟ್ಟಿನಲ್ಲಿ ಅಧ್ಯಾತ್ಮ ದರ್ಶನ ಕುರಿತು ಹಿರಿಯ ವಿಮರ್ಶಕ, ನಿವೃತ್ತ ಪ್ರಾಧ್ಯಾಪಕ ಡಾ. ಎಸ್.ಪಿ.ಪದ್ಮಪ್ರಸಾದ್, ತುಮಕೂರು, ಸಾಮಾಜಿಕ ಮೌಲ್ಯಗಳ ಪ್ರಸ್ತುತತೆ ಕುರಿತು ಮಂಗಳೂರು ವಿಶ್ವವಿದ್ಯಾನಿಲಯದ ಲೇಖಕ, ಸಹ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಲೆ ಹಾಗೂ ಕೃಷ್ಣ ಕೃಷ್ಣೆಯರ ಸಂಬಂಧ – ವೈಶಿಷ್ಟ ಕುರಿತು ಕವಯಿತ್ರಿ, ಎಂ.ಜಿ.ಎಂ ಕಾಲೇಜಿನ ಉಪನ್ಯಾಸಕಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು – ಉಡುಪಿ ಉಪನ್ಯಾಸ ನೀಡಲಿದ್ದಾರೆ.
ಸಂಜೆ ನಡೆಯಲಿರುವ ಅಭಿನಂದನಾ ಸಮಾರಂಭದಲ್ಲಿ ಕಾಂತಾವರದ ಅಲ್ಲಮಪ್ರಭು ಪೀಠ, ಕನ್ನಡಸಂಘ, ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾ ಘಟಕದ ವತಿಯಿಂದ ಡಾ.ವೀರಪ್ಪ ಮೊಯಿಲಿಯವರನ್ನು ಅಭಿನಂದಿಸುವ ಕಾರ್ಯಕ್ರಮ ನಡೆಯಲಿದೆ. ಡಾ.ಗಣನಾಥ ಎಕ್ಕಾರು ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ. ರಾಷ್ಟ್ರದ ಪ್ರತಿಷ್ಠಿತ ‘ಸರಸ್ವತಿ ಸಮ್ಮಾನ್’ ಪ್ರಶಸ್ತಿ ಪಡೆದಿರುವ, ‘ರಾಮಾಯಣ ಮಹಾನ್ವೇಷಣಂ’ ಎನ್ನುವ ಮಹಾಕಾವ್ಯದ ಬಳಿಕ ‘ಸಿರಿಮುಡಿ ಪರಿಕ್ರಮಣ’ ಮಹಾಭಾರತದ ದ್ರೌಪದಿಯನ್ನು ಆಧುನಿಕ ನೆಲೆಯಲ್ಲಿ ಚಿತ್ರಿಸಿ ಈ ನೆಲದ ಸ್ತ್ರೀ ಸಂವೇದನೆಯ ಹೊಸತನವನ್ನು ತೋರುವ ಮಹಾಪ್ರಯತ್ನ ನಡೆಸಿರುವ ಹಿನ್ನೆಲೆಯಲ್ಲಿ ಈ ಅಭಿನಂದನಾ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಪೀಠದ ಪ್ರಧಾನ ನಿರ್ದೇಶಕ ಡಾ. ನಾ.ಮೊಗಸಾಲೆ ತಿಳಿಸಿದ್ದಾರೆ.


Spread the love