ಕಾನೂನು ಬಾಹು ಬಲಿಷ್ಠವಾಗಿದೆ : ಎಸ್‌ಐ ಪವನ್ ನಾಯಕ್
- ನಾಡಾ ಐಟಿಐ ಯಲ್ಲಿ ಸೈಬರ್, ಮಾದಕ ಅಪರಾಧ ಜಾಗೃತಿ ಕಾರ್ಯಕ್ರಮ
ಕುಂದಾಪುರ: ಸಮಾಜದ ನೆಮ್ಮದಿಯನ್ನು ಕೆಡಿಸುತ್ತಿರುವ ಸೈಬರ್ ಅಪರಾಧ ಪ್ರಕರಣಗಳಲ್ಲಿ ನಷ್ಟಕ್ಕೆ ಒಳಗಾಗಿ ಸಂಕಷ್ಟಕ್ಕೆ ಒಳಗಾಗುವ ಮೊದಲು ಸ್ವಯಂ ಜಾಗೃತಿ ಅತ್ಯಂತ ಅವಶ್ಯಕ ಎಂದು ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ಪವನ್ ನಾಯಕ್ ಹೇಳಿದರು.

ನಾಡಾ ಗುಡ್ಡೆ ಹೋಟೆಲ್‌ನ ರೇ.ಫಾ.ರಾಬರ್ಟ್ ಡಿಸೋಜಾ ಐಟಿಐ ಕಾಲೇಜಿನಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯ ಸಹಯೋಗದಲ್ಲಿ ಬುಧವಾರ ನಡೆದ ಸೈಬರ್ ಸುರಕ್ಷತಾ ಜಾಗೃತಿ ಅಭಿಯಾನ ಹಾಗೂ ಮಾದಕ ಅಪರಾಧ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸೈಬರ್ ಅಪರಾಧ ಪ್ರಕರಣಗಳಲ್ಲಿ ವಂಚನೆಗೆ ಒಳಗಾಗುವವರಲ್ಲಿ ವಿದ್ಯಾವಂತರೇ ಅಧಿಕವಾಗಿದ್ದಾರೆ. ವಂಚನೆ ಘಟಿಸಿದ ತಕ್ಷಣವೇ ರಾಷ್ಟ್ರೀಯ ಸೈಬರ್ ಸಹಾಯವಾಣಿ ಹಾಗೂ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಯಾವುದೇ ಅನಪೇಕ್ಷಿತ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೊದಲು ಆಲೋಚಿಸಬೇಕು. ಪಾಸ್ವರ್ಡ್ ಸೇರಿದಂತೆ ಯಾವುದೇ ಖಾಸಗಿ ಮಾಹಿತಿಗಳನ್ನು ಸುರಕ್ಷತೆ ಇಲ್ಲದೆ ಹಂಚಿಕೊಳ್ಳಬಾರದು. ಹದಿಹರೆಯದವರಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಮಾದಕ ವ್ಯಸನ ಹಾಗೂ ಮಾರಾಟದ ಬಗ್ಗೆ ಪೊಲೀಸ್ ಇಲಾಖೆ ಕಣ್ಗಾವಲು ನಡೆಸುತ್ತಿದೆ. ಅಪರಾಧ ಪ್ರಕರಣಗಳಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಭಾಗಿಯಾಗುವ ಯಾರನ್ನೂ ಕೂಡ ಕಾನೂನು ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಲು ಇಲಾಖೆ ಕಟಿಬದ್ಧವಾಗಿದೆ. ಅಪರಾಧ ಚಟುವಟಿಕೆಗಳ ವಿರುದ್ಧ ಕಾನೂನು ಬಾಹುಗಳು ಬಲಿಷ್ಠವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಮನೋಹರ್ ಆರ್ ಕಾಮತ್ ಅವರು, ನಮಗೆ ಅರಿವಿಲ್ಲದಂತೆ ಅಪರಾಧ ಲೋಕದೊಳಗೆ ಸೇರಿಕೊಳ್ಳುವ ಮೊದಲು ಜಾಗೃತರಾಗಿರಬೇಕು. ಮಾದಕ ವ್ಯಸನಗಳು ವೈಯಕ್ತಿಕ ಜೀವನವನ್ನು ಹಾಳುಮಾಡುವ ಜೊತೆ ಕುಟುಂಬದ ನೆಮ್ಮದಿಯನ್ನೂ ಕೆಡಿಸುತ್ತದೆ. ಆಕಸ್ಮಿಕ ಗೆಳೆತನ ಕೆಟ್ಟದ್ದನ್ನು ಪ್ರಚೋದಿಸುತ್ತದೆ ಎಂದಾದರೆ, ಅದರಿಂದ ಅಂತರ ಕಾಯ್ದುಕೊಳ್ಳುವುದು ಒಳ್ಳೆಯದು ಎಂದರು.
ಗ್ರಹ ರಕ್ಷಕ ದಳ ಜಿಲ್ಲಾ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಟಿಐ ಆಡಳಿತ ಮಂಡಳಿ ಕಾರ್ಯದರ್ಶಿ ನವೀನ್ ಲೋಬೊ, ಗಂಗೊಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಮಾಹಲಿಂಗ ರಾಯ್, ಮಾರುತಿ ಇದ್ದರು.
ಎಸ್‌ಐ ಪವನ್ ನಾಯಕ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕಿರಿಯ ತರಬೇತಿ ಅಧಿಕಾರಿಗಳಾದ ದಿನೇಶ್ ಕೆ ಬೈಂದೂರು ಸ್ವಾಗತಿಸಿದರು, ರಾಘವೇಂದ್ರ ಆಚಾರ್ ಕಟ್‌ಬೇಲ್ತೂರ್ ವಂದಿಸಿದರು, ಕಿಶೋರ್ ಪೂಜಾರಿ ಸಸಿಹಿತ್ಲು ಬೈಂದೂರು ನಿರೂಪಿಸಿದರು.












