ಕಾಪು: ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ದನದ ಮಾಂಸ ಸಾಗಾಟ – ಇಬ್ಬರ ಬಂಧನ
ಕಾಪು: ಅಕ್ರಮವಾಗಿ ದನದ ಮಾಂಸವನ್ನು ರಿಕ್ಷಾದಲ್ಲಿ ಸಾಗಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಕಾಪು ಪೊಲೀಸರು ಶನಿವಾರ ಸಂಜೆ ಬಂಧಿಸಿದ್ದಾರೆ.

ಬಂಧಿತರನ್ನು ಮಲ್ಲಾರು ನಿವಾಸಿ ಅರಾಫತ್ (32) ಮತ್ತು ಹುಸೈನಬ್ಬ (52) ಎಂದು ಗುರುತಿಸಲಾಗಿದೆ.
ಶನಿವಾರ ಸಂಜೆ 6.30 ರ ಸುಮಾರಿಗೆ ಕಾಪು ಕ್ರೈಂ ಪಿ ಎಸ್ ಐ ಆಗಿರುವ ಐ ಆರ್ ಗಡ್ಡೇಕರ್ ಅವರಿಗೆ ಬೀಟ್ ಸಿಬಂದಿ ರವೀಂದ್ರ ಹೆಚ್ ರವರು ಆಟೋ ರಿಕ್ಷಾದಲ್ಲಿ ದನದ ಮಾಂಸವನ್ನು ಸಾಗಾಟ ಮಾಡುತ್ತಿರುವುದಾಗಿ ನೀಡಿದ ಮಾಹಿತಿಯಂತೆ ತನ್ನ ಸಿಬ್ಬಂದಿಗಳೊಂದಿಗೆ ಮಲ್ಲಾರು ಗ್ರಾಮದ ಪಕೀರಣಕಟ್ಟೆ ಜಂಕ್ಷನಲ್ಲಿ ವಾಹನ ತಪಾಸಣೆ ನಡೆಸುತ್ತಿರುವಾಗ ಸಂಜೆ 7:00 ಗಂಟೆ ಸಮಯಕ್ಕೆ ಬೆಳಪು ಕಡೆಯಿಂದ ಮಜೂರು ಕಡೆಗೆ ಆಟೋ ರಿಕ್ಷಾ ನಂಬ್ರ KA 20 AA 7958 ನೇಯದು ಬಂದಿದ್ದು ಸದ್ರಿ ಆಟೋ ರಿಕ್ಷಾ ವನ್ನು ನಿಲ್ಲಿಸಿ ಪರಿಶೀಲಿಸಿದಾಗ ಕಾನೂನು ಬಾಹಿರವಾಗಿ ದನದ ಮಾಂಸ ಸಾಗಿಸುವುದು ಪತ್ತೆಯಾಗಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ದನದ ಮಾಂಸ ಸಾಗಾಟಕ್ಕೆ ಬಳಸಿದ ಆಟೋ ರಿಕ್ಷಾ ಮತ್ತು ದನದ ಮಾಂಸವನ್ನು ಸ್ವಾದೀನಪಡಿಸಿಕೊಳ್ಳಲಾಗಿದೆ.
ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.













