ಕಾರಂತರು ಹೇಳಿದಂತೆ ನಾನು ನನ್ನ ಆತ್ಮ ಸಾಕ್ಷಿಗೆ ಮಾತ್ರ ಉತ್ತರಿಸುತ್ತೇನೆ; ಪ್ರಶಸ್ತಿ ಸ್ವೀಕರಿಸಿ ಪ್ರಕಾಶ್ ರೈ

Spread the love

ಕಾರಂತರು ಹೇಳಿದಂತೆ ನಾನು ನನ್ನ ಆತ್ಮ ಸಾಕ್ಷಿಗೆ ಮಾತ್ರ ಉತ್ತರಿಸುತ್ತೇನೆ; ಪ್ರಶಸ್ತಿ ಸ್ವೀಕರಿಸಿ ಪ್ರಕಾಶ್ ರೈ

ಉಡುಪಿ: ಕಾರಂತರು ಹೇಳಿದಂತೆ ನಾನು ನನ್ನ ಆತ್ಮ ಸಾಕ್ಷಿಗೆ ಮಾತ್ರ ಉತ್ತರಿಸಬಲ್ಲವನಾಗಿದೆ. ನನ್ನನ್ನು ನೇರ ನಿಷ್ಠುರವಾದಿಯಾಗಿಸಿದ್ದು ಕಾರಂತಜ್ಜ, ಅವರ ಮೊಮ್ಮಗನಾಗಿ ನಾನು ಸುಮ್ಮನೆ ಕುಳಿತುಕೊಳ್ಳುವ ಹೇಡಿಯಾಗಲು ಬಯಸುವವನು ನಾನಲ್ಲ. ಅವರ ಹುಟ್ಟಿದೂರಿನಲ್ಲಿ ಸಂಭ್ರಮಾಚರಿಸುತ್ತಿರುವ ಸಹೃದಯಿಗಳಿಗಾಗಿ ಮತ್ತು ಕಾರಂತರಂತೆ ತಮ್ಮ ನಿರ್ಧಾರದಲ್ಲಿ ಅಚಲವಾಗಿ ಉಳಿದ ಪ್ರತಿಷ್ಠಾನದ ನಿರ್ಧಾರಕ್ಕೆ ಸಂತಸಗೊಂಡು ಇಲ್ಲಿಗೆ ಬಂದೆ ಎಂದು ಬಹುಭಾಷಾ ನಟ ನಿರ್ದೇಶಕ ಪ್ರಕಾಶ್ ರೈ ಹೇಳಿದರು.

 ಅವರು ಮಂಗಳವಾರ ಕೋಟ ಕಾರಂತ ಥೀಂ ಪಾರ್ಕ್‍ನಲ್ಲಿ ಅಕ್ಟೋಬರ್ 1ರಿಂದ ಕೋಟತಟ್ಟು ಗ್ರಾಮ ಪಂಚಾಯತ್, ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ (ರಿ.) ಕೋಟ ಸಾರಥ್ಯದಲ್ಲಿ ಡಾ.ಶಿವರಾಮ ಕಾರಂತ ಟ್ರಸ್ಟ್(ರಿ.) ಉಡುಪಿ ಸಹಯೋಗದಲ್ಲಿ ಡಾ.ಶಿವರಾಮ ಕಾರಂತ ಜನ್ಮದಿನೋತ್ಸವ ಮತ್ತು ಹುಟ್ಟೂರ ಪ್ರಶಸ್ತಿಗೆ 13ನೇ ವರುಷದ ಸಂಭ್ರಮ ತಂಬೆಲರು 2017 ಕಾರ್ಯಕ್ರಮದಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ನಾವು ನಮ್ಮ ಮಕ್ಕಳಿಗೆ ಧೈರ್ಯದಿಂದ, ಭಯವಿಲ್ಲದೇ ನೆಮ್ಮದಿಯಿಂದ ಬದುಕುವ ಸಮಾಜ ನಿರ್ಮಿಸಿಕೊಡಬೇಕಾದ ಜವಬ್ದಾರಿ ಪ್ರಜ್ಞಾವಂತರಾದ ನಮ್ಮ ಮೇಲಿದೆ. ಮುಂದಿನ ಸಮಾಜಕ್ಕೆ ವಾಕ್ ಸ್ವಾತಂತ್ರ್ಯವನ್ನು ನೀಡಬೇಕಾದ ಅಗತ್ಯತೆ ಇದೆ, ಭಾರತದ ಸಂವಿಧಾನ ಸಮಾನವಾಗಿ ನೀಡಿರುವ ಸ್ವಾತಂತ್ರ್ಯ ಅನುಭವಿಸುವ ಅದರಲ್ಲಿ ಜೀವಿಸುವ ಹಕ್ಕು ಎಲ್ಲರಿಗೆ ಇದೆ. ಮತ್ತೊಬ್ಬರನ್ನುನ ಭಯ ಬೀಳಿಸುವ ಕ್ರೌರ್ಯ ಸಮಾಜಕ್ಕೆ ಬೇಡ ಎಂದರು.

 ಕ್ಷಮಿಸಿ ನನ್ನಿಂದ ಇಷ್ಟು ದಿನ ನಿಮ್ಮ ಮನಸ್ಸಿಗೆ ನೋವಾಗಿದ್ದರೆ. ಕಾರಂತರ ಹೆಸರಿನ ಪ್ರಶಸ್ತಿ ಎಂದಾಗ ಆದ ಸಂತಸ ಅಷ್ಟಿಷ್ಟಲ್ಲ, ನನ್ನ ತಾಯಿ, ನನ್ನ ಮಗಳು, ನನ್ನ ಗೆಳೆಯರಿಗೆ ತಿಳಿಸಿ ಸಂತಸ ಪಟ್ಟವನು ನಾನು. ಇಂದು ಅಜ್ಜನ ಮನೆಗೆ ಮೊಮ್ಮಗ ಬಂದಷ್ಟೆ ಸಂತೋಷವಾಗುತ್ತಿದೆ ನನಗೆ. ಕಾರಂತರು ಎಂದಿಗೂ ಸುಳ್ಳನ್ನು ಇಷ್ಟ ಪಟ್ಟವರ ಒಪ್ಪಿಕೊಂಡವರಲ್ಲ. ಅವರು ಬದುಕಿರುವುದನ್ನೆ ಬರೆದು ನಮಗೆ ತೋರಿಸಿದವರು, ನಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದವರಲ್ಲ. ಕಾರಂತರು ಅಗಾಧವಾಗಿ ಬೆಳೆದು ನಿಂತು ಸಾವಿರಾರು ಜನರಿಗೆ ನೆರಳು ನೀಡುತ್ತಿರುವ ದೈತ್ಯ ಮರ ಎಂದರು.

 ಕಾಡನ್ನು ನಮಗೆ ಪರಿಚಯಿಸಿದಿದ್ದರೆ ಅದು ನಮ್ಮ ಕನ್ನಡ ಸಾಹಿತ್ಯ. ಅದರಲ್ಲೂ ಕುವೆಂಪು ಅವರು ದಟ್ಟ ಕಾನನದ ಸೊಬಗು ಪರಿಚಯಿಸಿದರೆ, ಕಾರಂತರು ಕಾಡು ಮತ್ತು ಮನುಷ್ಯನ ಹೋರಟದ ಪರಿಚಯ ನೀಡಿದ್ದರು, ತೇಜಸ್ವಿಯವರು ಕಾಡಿನ ಸಂತರಾಗಿ ಕಾಡಿನ ಪರಿಚಯ ನೀಡಿದವರು. ಅವರು ಜ್ಞಾನಾರ್ಜನೆಗಾಗಿ ಕಷ್ಟಪಟ್ಟವರಲ್ಲ ಆದರೂ ಅವರನ್ನು ಜ್ಞಾನಪೀಠ ಹುಡುಕಿ ಬಂದಿದೆ, ಯಾವುದೇ ಪದವಿ ಶಿಕ್ಷಣಕ್ಕೆ ಗಂಟು ಬಿಟ್ಟವರಲ್ಲ ಆದರೂ ಅವರನ್ನು ಅನೇಕ ಡಾಕ್ಷರೇಟ್ ಹುದ್ದೆಗಳು ಅರಸಿ ಬಂದಿವೆ ಎಂದರು.

 ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಕೋಟತಟ್ಟು ಪಂಚಾಯತ್ ಅಧ್ಯಕ್ಷ ಎಚ್. ಪ್ರಮೋದ್ ಹಂದೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚಿತ್ರ ನಿರ್ದೇಶಕ ಜಿ.ವಿ.ಮೂರ್ತಿ, ಕೋಟತಟ್ಟು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ವಡ್ಡರ್ಸೆ, ಕೋಟ ಪಂಚಾಯತ್ ಅಧ್ಯಕ್ಷೆ ವನಿತಾ ಶ್ರೀಧರ ಆಚಾರ್ಯ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮೋಹನ್ ರಾಜ್, ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ರತ್ನಾ ಗಾಣಿಗ ಉಪಸ್ಥಿತರಿದ್ದರು. ಆಯ್ಕೆಯ ಸಮಿತಿಯ ಸದಸ್ಯರಾದ ಪತ್ರಕರ್ತ ಯು.ಎಸ್.ಶೆಣೈ ಅವರು ಕಾರಂತ ಹುಟ್ಟೂರ ಪ್ರಶಸ್ತಿ ಮಾನದಂಡ ಮತ್ತು ಆಯ್ಕೆ ಪ್ರಕ್ರಿಯೆಯ ಕುರಿತು ಮಾತನಾಡಿದರು.

 ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ.ಕುಂದರ್ ಸ್ವಾಗತಿಸಿದರು. ಆಯ್ಕೆಯ ಸಮಿತಿಯ ಸದಸ್ಯರಾದ ನ್ಯಾಯವಾದಿ ಟಿ.ಬಿ.ಶೆಟ್ಟಿ ಪ್ರಸ್ತಾವಿಸಿದರು. ಪ್ರಸಾದ್ ಬಿಲ್ಲವ ಕಾರ್ಯಕ್ರಮ ನಿರೂಪಿಸಿ ನಿರ್ವಹಿಸಿದರು. ಸಾಲಿಗ್ರಾಮ ಮಕ್ಕಳ ಮೇಳದ ಶ್ರೀಧರ ಹಂದೆ ಯಕ್ಷಗಾನ ಶೈಲಿಯಲ್ಲಿ ಪ್ರಕಾಶ್ ರೈ ಅವರನ್ನು ಸಭೆಗೆ ಪರಿಚಯಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಕಾರಂತ ಥೀಂ ಪಾರ್ಕ್ ಮುಂದೆ ಪ್ರಕಾಶ್ ರೈ ಅವರನ್ನು ಸ್ವಾಗತಿಸಿ ಪ್ರಶಸ್ತಿ ಫಲಕವನ್ನು ಪಲ್ಲಕ್ಕಿ ಮೆರವಣಿಗೆಯಲ್ಲಿ ಕಾರಂತ ಥೀಂ ಪಾರ್ಕ್ ಒಳಗೆ ತರಲಾಯಿತು. ಕಾರಂತ ಥೀಂ ಪಾರ್ಕ್ ಪುಷ್ಕರಣಿ ಮಧ್ಯದಲ್ಲಿರುವ ಕಾರಂತರ ಕಂಚಿನ ಪ್ರತಿಮೆಗೆ ಪ್ರಕಾಶ್ ರೈ ಅವರು ಪುಷ್ಟ ಮಾಲೆ ತೊಡಿಸಿ ಗೌರವ ಸಲ್ಲಸಿ, ಕಾರಂತ ಥೀಂ ಪಾರ್ಕ್‍ನ ಆಕರ್ಷಣೆಗಳನ್ನು ವೀಕ್ಷಿಸಿದರು. ಸಭಾ ಕಾರ್ಯಕ್ರಮದ ಬಳಿಕ ಯಕ್ಷಗಾನ ಗಾನ ವೈವಿಧ್ಯ ನಡೆಯಿತು.


Spread the love

1 Comment

  1. Please advise Sri Prakash Rai to restrict himself from giving defamatory and inflammatory statements while expressing views daringly. We are happy that he wants to follow the path of life of Sri K. Shivaram Karanth, a Legendary. .I wish him a great success.

Comments are closed.