ಕಾರವಾರ: ಮೀನುಗಾರಿಕೆ ವೇಳೆ ಯುವಕನ ಹೊಟ್ಟೆಗೆ ಚೂಪು ಮೂತಿಯ ಮೀನು ಚುಚ್ಚಿ ಮೃತ್ಯು
ಕಾರವಾರ: ಮೀನುಗಾರಿಕೆಗೆ ತೆರಳಿದ್ದ ಯುವಕನಿಗೆ ಚೂಪು ಮೂತಿಯ ಮೀನು ನೀರಿನಿಂದ ಜಿಗಿದು ಬಂದು ಹೊಟ್ಟೆಗೆ ಚುಚ್ಚಿದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕಾರವಾರದಲ್ಲಿ ಸಂಭವಿಸಿದೆ
ಕಾರವಾರದ ಮಾಜಾಳಿಯ ದಾಂಡೇಭಾಗದ ಅಕ್ಷಯ್ ಅನಿಲ್ ಮಾಜಾಳಿಕರ್ ಮೀನಿನಿಂದಲೇ ಬಲಿ ಆಗಿರುವ ನತದೃಷ್ಟ ಯುವಕ. ಅರಬ್ಬಿ ಸಮುದ್ರದಲ್ಲಿ ಮತ್ಸ್ಯ ಬೇಟೆಗೆ ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಅಕ್ಟೋಬರ್ 14ರಂದು ಅಕ್ಷಯ್, ಆಳ ಸಮುದ್ರದಲ್ಲಿ ಮತ್ಸ್ಯ ಶಿಕಾರಿಗೆ ತೆರಳಿದ್ದ. ದೋಣಿಯಲ್ಲಿದ್ದಾಗಲೇ 8ರಿಂದ 10 ಇಂಚು ಉದ್ದದ ಚೂಪು ಮೂತಿಯ ಕಾಂಡೆ ಮೀನು, ನೀರಿನಿಂದ ಜಿಗಿದು ಬಂದು ಅಕ್ಷಯ್ ಹೊಟ್ಟೆಗೆ ಚುಚ್ಚಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಅಕ್ಷಯನನ್ನು ಕೂಡಲೇ ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 2ದಿನ ಚಿಕಿತ್ಸೆ ಪಡೆದ ಬಳಿಕ ಗಾಯಕ್ಕೆ ಹೊಲಿಗೆ ಹಾಕಿ ವೈದ್ಯರು ಡಿಸ್ಚಾರ್ಜ್ ಮಾಡಿದ್ದರು. ಆದರೆ, ನೋವು ಮರುಕಳಿಸಿದ್ದರಿಂದ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದ. ದುರದೃಷ್ಟವಶಾತ್ ಗುರುವಾರ (ಅಕ್ಟೋಬರ್ 16) ಬೆಳಗಿನ ಜಾವ 5 ಗಂಟೆಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.