ಕಾರ್ಕಳ ಮೂಲದ ಹೋಟೆಲ್ ಮಾಲೀಕ ಪುಣೆಯಲ್ಲಿ ಹತ್ಯೆ
ಕಾರ್ಕಳ: ಮಹಾರಾಷ್ಟ್ರದ ಪುಣೆಯಲ್ಲಿ ಮಂಗಳವಾರ (ಆ.26) ರಾತ್ರಿ ನಡೆದ ಭೀಕರ ಘಟನೆಗೆ ಕಾರ್ಕಳ ಮೂಲದ ಹೋಟೆಲ್ ಮಾಲೀಕನ ಹತ್ಯೆ ಮಾಡಿದ ಘಟನೆ ನಡೆದಿದೆ.
ಹೋಟೆಲ್ ಸಿಬ್ಬಂದಿಯೊರ್ವ ಮದ್ಯಪಾನ ಮಾಡಿ ಕೆಲಸ ಮಾಡುತ್ತಿದ್ದ ಕಾರಣಕ್ಕೆ ಮಾಲೀಕ ಗದರಿಸಿದ್ದು ಇದೇ ಕಾರಣಕ್ಕೆ ಸಿಟ್ಟಿಗೆದ್ದ ಸಿಬ್ಬಂದಿ ಮಾಲೀಕನನ್ನೇ ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಹತ್ಯೆಯಾದವರು ಕಾರ್ಕಳ ತಾಲೂಕಿನ ಎಣ್ಣೆಹೊಳೆ ಕುಮೇರುಮನೆ ನಿವಾಸಿ ಸಂತೋಷ್ ಶೆಟ್ಟಿ (46) ಎಂದು ಗುರುತಿಸಲಾಗಿದೆ.
ಉತ್ತರ ಪ್ರದೇಶ ಮೂಲದ ಹೋಟೆಲ್ ಸಿಬ್ಬಂದಿ ಕೆಲಸದ ಸಮಯದಲ್ಲಿ ಮದ್ಯಪಾನ ಮಾಡಿದ್ದಕ್ಕೆ ಸಂತೋಷ್ ಶೆಟ್ಟಿ ಬುದ್ಧಿವಾದ ಹೇಳಿದ್ದಾರೆ, ಇದರಿಂದ ಆಕ್ರೋಶಗೊಂಡ ಸಿಬ್ಬಂದಿ ಅಡುಗೆ ಕೋಣೆಯಿಂದ ಕತ್ತಿ ತಂದು ಶೆಟ್ಟಿಯವರ ಹತ್ಯೆ ಮಾಡಿದ್ದಾನೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.
ಘಟನೆ ಮಂಗಳವಾರ ರಾತ್ರಿ ಸುಮಾರು 10 ಗಂಟೆಗೆ ನಡೆದಿದೆ. ಸಂತೋಷ್ ಶೆಟ್ಟಿ ಅವರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಹುಟ್ಟೂರು ಎಣ್ಣೆಹೊಳೆಗೆ ತರಲಾಗುತ್ತಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.