ಕಾರ್ಯಕರ್ತರು ಮನಸ್ಸು ಮಾಡಿದರೆ ಲೋಕಸಭಾ ಚುನಾವಣೆಯಲ್ಲಿ ಗೆಲವು ನಿಶ್ಚಿತ – ಪ್ರಮೋದ್ ಮಧ್ವರಾಜ್

Spread the love

ಕಾರ್ಯಕರ್ತರು ಮನಸ್ಸು ಮಾಡಿದರೆ ಲೋಕಸಭಾ ಚುನಾವಣೆಯಲ್ಲಿ ಗೆಲವು ನಿಶ್ಚಿತ – ಪ್ರಮೋದ್ ಮಧ್ವರಾಜ್

ಉಡುಪಿ: ಈ ಬಾರಿಯ ಲೋಕಸಭಾ ಚುನಾವಣೇಯಲ್ಲಿ ನನ್ನನ್ನು ಗೆಲ್ಲಿಸಿಕೊಟ್ಟರೆ ಮುಂದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಸೇವಕನಾಗಿ ದುಡಿಯುತ್ತೇನೆ. ಕಾರ್ಯಕರ್ತರು ಮನಸ್ಸು ಮಾಡಿದರೆ ಯಾರನ್ನೂ ಬೇಕಾದರೂ ಗೆಲ್ಲಿಸಲು ಆಗುತ್ತದೆ ಮತ್ತು ಸೋಲಿಸಲೂ ಆಗುತ್ತದೆ. ಅದರ ಅನುಭವ ನನಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಗಿದ್ದು ಅದರಿಂದ ಪಾಠ ಕೂಡ ಕಲಿತಿದ್ದೇನೆ. ಈ ಹಿಂದೆ ಶಾಸಕನಾಗಿದ್ದಾಗ ಕ್ಷೇತ್ರದ ಅಭಿವೃದ್ಧಿ ಮಾಡಬೇಕೆಂಬ ಒತ್ತಾಸೆಯಿಂದ ಕೆಲಸಗಳ ಒತ್ತಡದಿಂದ ಕಾರ್ಯಕರ್ತರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದರು.

ಜಿಲ್ಲಾ ಕಾಂಗ್ರೆಸ್ ವತಿಯಿಂದ ಭಾನುವಾರ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಪ್ರಮೋದ್ ಈ ಬಾರಿಯ ಚುನಾವಣೆಯಲ್ಲಿ ತನ್ನನ್ನು ಗೆಲ್ಲಿಸಿಕೊಡುವಂತೆ ವಿನಂತಿಸಿದರು. ಮುಂದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಸೇವಕನಾಗಿ ದುಡಿಯುತ್ತೇನೆ ಎಂದು ಭರವಸೆ ನೀಡಿದರು.

ಈ ಬಾರಿಯ ಚುನಾವಣೆಯಲ್ಲಿ ನಿಮ್ಮ ಮುಂದೆ ಎರಡು ರೀತಿಯ ಪ್ರೊಡಕ್ಟ್ಗಳಿವೆ. ಒಂದು ಪ್ರಮೋದ್ ಮಧ್ವರಾಜ್ ಹಾಗೂ ಇನ್ನೊಂದು ಶೋಭಾ ಕರಂದ್ಲಾಜೆ. ಅದರಲ್ಲಿ ನೀವು ಪ್ರಮೋದ್ ಎಂಬ ಪ್ರೊಡಕ್ಟ್ ಬಗ್ಗೆ ಮಾರ್ಕೆಟಿಂಗ್ ಮಾಡುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದ ಪ್ರಮೋದ್, ಈ ಬಾರಿ ಕೆಲಸ ಮಾಡುವ ಎಂಪಿ (ಪ್ರಮೋದ್ ಮಧ್ವರಾಜ್) ಬೇಕೇ ಅಥವಾ ಕೆಲಸ ಮಾಡದ ಎಂಪಿ ಬೇಕೇ ಎಂಬ ಪ್ರಶ್ನೆಯನ್ನು ಕಾರ್ಯಕರ್ತರ ಮುಂದಿಟ್ಟರು. ಕಳೆದ 5 ವರ್ಷದಿಂದ ಕ್ಷೇತ್ರದ ಬಗ್ಗೆ ಗಮನಕೊಡದ ಶೋಭಾ ಈಗ ಚುನಾವಣೆ ಸಂದರ್ಭ ಸಾಧನೆಯ ಪಟ್ಟಿ ಬಿಡುಗಡೆ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಏನೂ ಕೆಲಸ ಮಾಡದ ಶೋಭಾ ಕರಂದ್ಲಾಜೆ ಕಾರ್ಯದ ಬಗ್ಗೆ ಮುಂದಿನ ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುವುದಾಗಿ ತಿಳಿಸಿದರು.

ಭವಿಷ್ಯದ ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ಸ್ಪರ್ಧೆಗೆ ಇಳಿದಿದ್ದು, ನಾನು ಕಾಂಗ್ರೆಸ್ ಜೆಡಿಎಸ್ ಪಕ್ಷದ ಜಂಟಿ ಅಭ್ಯರ್ಥಿಯಾಗಿ ಜೆಡಿಎಸ್ ಚಿಹ್ನೆಯಡಿ ಸ್ಪರ್ಧೆ ಮಾಡುತ್ತಿದ್ದೇನೆ. ಮೋದಿ ಸರ್ಕಾರವನ್ನು ಕಿತ್ತೊಗೆಯುವ ಹೋರಾಟ ನಮ್ಮ ಮುಂದಿದೆ. ಮೋದಿ ಸರ್ಕಾರದಿಂದ ದೇಶದ ಆರ್ಥಿಕತೆಗೆ ದೊಡ್ಡ ಗಂಡಾಂತರ ಎದುರಾಗಿದೆ. ಅದರಿಂದ ನಾನೂ ಸೇರಿದಂತೆ ಎಲ್ಲರೂ ಕಷ್ಟದಲ್ಲಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಅಮಿತ್ ಶಾ ಪುತ್ರ ಹಾಗೂ ಅಂಬಾನಿ ಬಿಟ್ಟರೆ ಬೇರೆ ಯಾರ ಆದಾಯವೂ ಹೆಚ್ಚಾಗಿಲ್ಲ ಎಂದು ಪ್ರಮೋದ್ ಟೀಕಿಸಿದರು. ಎಂದು ಅವರು ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಜಿ. ಎ. ಬಾವಾ ಮತ್ತು ಎಂ. ಎ. ಗಫೂರ್, ಮಾಜಿ ಶಾಸಕ ಯು. ಆರ್. ಸಭಾಪತಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಪಕ್ಷ ಪ್ರಮುಖರಾದ ಭರತ್ ಮುಂಡೋಡಿ, ವೆರೋನಿಕಾ ಕರ್ನೆಲಿಯೊ, ಮುರಳಿ ಶೆಟ್ಟಿ ಇಂದ್ರಾಳಿ, ವಿಶ್ವಾಸ್ ಅಮೀನ್, ಸರಳಾ ಕಾಂಚನ್, ನಿತ್ಯಾನಂದ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಸತೀಶ್ ಅಮೀನ್ ಪಡುಕರೆ, ಯತೀಶ್ ಕರ್ಕೇರ, ಚಂದ್ರಿಕಾ ಶೆಟ್ಟಿ ಮೊದಲಾದವರಿದ್ದರು.


Spread the love